ಪಟ್ಟಣ ಸೇರಿದಂತೆ ತಾಲೂಕಿನ ಕೃಷಿ ಜಮೀನುಗಳಿಗೆ ರಾತ್ರಿ ವೇಳೆ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸೋಮವಾರ ಇಲ್ಲಿನ ಕಾಲಕಾಲೇಶ್ವರ ರೈತ ಸಂಘದಿಂದ ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ರೈತರು ಧರಣಿ ಸತ್ಯಾಗ್ರಹ ನಡೆಸಿದರು.

ರೈತ ಸಂಘದಿಂದ ಆಗ್ರಹ । ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಪಟ್ಟಣ ಸೇರಿದಂತೆ ತಾಲೂಕಿನ ಕೃಷಿ ಜಮೀನುಗಳಿಗೆ ರಾತ್ರಿ ವೇಳೆ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸೋಮವಾರ ಇಲ್ಲಿನ ಕಾಲಕಾಲೇಶ್ವರ ರೈತ ಸಂಘದಿಂದ ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ರೈತರು ಧರಣಿ ಸತ್ಯಾಗ್ರಹ ನಡೆಸಿದರು.

ತಾಲೂಕಿನ ಭಾಗಶಃ ರೈತರು ಮಳೆಯಾಧಾರಿತ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಇನ್ನೂ ಕೆಲವು ರೈತರು ಜಮೀನಿನಲ್ಲಿಯೇ ಗುಡಿಸಲು ಹಾಗೂ ಮನೆ ನಿರ್ಮಿಸಿಕೊಂಡು ಹಸು, ಆಡು, ಕುರಿ ಸೇರಿ ಅನೇಕ ಪ್ರಾಣಿಗಳ ಜತೆಗೆ ಕೃಷಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಹೆಸ್ಕಾಂ ಅಧಿಕಾರಿಗಳು ಅನಿಯಮಿತ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಪರಿಣಾಮ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ೩ ಚಿರತೆಗಳನ್ನು ಸೆರೆ ಹಿಡಿದಿರುವುದರ ಜತೆಗೆ ಚಿರತೆ ಕಾಣಿಸಿಕೊಂಡಿದೆ ಎಂಬ ಕೂಗು ಸಹ ಆಗಾಗ ಕೇಳಿ ಬರುತ್ತಿದ್ದರೂ ಸಹ ಹೆಸ್ಕಾ ಅಧಿಕಾರಿಗಳು ರಾತ್ರಿವೆಳೆ ಅನಿಯಮಿತ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ. ರಾತ್ರಿಯಾದರೆ ವನ್ಯ ಮೃಗಗಳ ದಾಳಿಯ ಭಯದ ಜತೆಗೆ ಕತ್ತಲ್ಲಲ್ಲಿ ಬದುಕು ಸಾಗಿಸುವ ದುಸ್ಥಿತಿ ರೈತರಿಗೆ ಬಂದಿದೆ. ಅಲ್ಲದೆ ಗಜೇಂದ್ರಗಡ ತಾಲೂಕು ಬರಪಿಡಿತ ಎಂದು ಸರ್ಕಾರ ಘೋಷಿಸಿ ₹೨೫೦೦ ಪರಿಹಾರ ಘೋಷಿಸಿದ್ದು ವಿಪರ್ಯಾಸ. ತಕ್ಷಣವೇ ಸ್ವಾಮಿನಾಥನ್ ಆಯೋಗದ ವರದಿ ಪ್ರಕಾರ ರೈತರಿಗೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ತಾಲೂಕಿನ ಉಣಚಗೇರಿ, ಕಾಲಕಾಲೇಶ್ವರ ಸೇರಿ ಇತರರ ಭಾಗದ ಜಮೀನುಗಳಲ್ಲಿ ಪಂಪ್‌ಸೆಟ್ ಮೂಲಕ ಅಳಿದುಳಿದ ಫಸಲಿನ ರಕ್ಷಣೆಗೆ ಮುಂದಾಗಿರುವ ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ರೈತರನ್ನು ಸಾಲದ ಸುಳಿಗೆ ಸಿಲುಕಿಕೊಳ್ಳುವಂತೆ ಮಾಡುತ್ತಿದೆ. ತಾಲೂಕಿನಲ್ಲಿ ರಾತ್ರಿ ವೇಳೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಹೆಸ್ಕಾಂ ಮುಂದಾಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

ಪ್ರತಿಭಟನೆ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಆಗಮಿಸಿ ಪ್ರತಿಭಟನಾನಿರತ ರೈತರ ಅಹವಾಲು ಆಲಿಸಿದರು. ಬಳಿಕ ಹೆಸ್ಕಾಂ ಜಿಲ್ಲಾ ವೃತ್ತ ಅಧೀಕ್ಷಕಿ ಎಂಜಿನಿಯರ್ ಕೆ. ನಜುಮುನ್ನಿತಾ, ಗಜೇಂದ್ರಗಡ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಜತೆಗೆ ಸಭೆ ನಡೆಸಿ, ಮೇಲಾಧಿಕಾರಿಗಳ ಜತೆ ದೂರವಾಣಿ ಮೂಲಕ ಧರಣಿ ಸತ್ಯಾಗ್ರಹದ ಮಾಹಿತಿ ನೀಡಿದರು. ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗಜೇಂದ್ರಗಡ ಹೆಸ್ಕಾಂ ಅಭಿಯಂತರ ವೀರೇಶ ರಾಜೂರ, ಲೋಡ್ ಶೆಡ್ಡಿಂಗ್ ಇಂದ ಸಮಸ್ಯೆಯಾಗಿದೆ. ೧೫ ದಿನದ ಗಡುವು ನೀಡಿ ಅದರೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು. ಆದರೆ ೧೦ ದಿನದೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಮತ್ತೆ ಹೋರಾಟವನ್ನು ಆರಂಭಿಸುತ್ತೇವೆ ಎಂದು ಎಚ್ಚರಿಸಿ ಹೋರಾಟವನ್ನು ಮೊಟಕುಗೊಳಿಸಿದರು.

ಇದಕ್ಕೂ ಮುನ್ನ ಪಟ್ಟಣದ ಹೆಸ್ಕಾಂ ಕಚೇರಿ ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಹಾಗೂ ಮುಖಂಡರು ಕಾಲಕಾಲೇಶ್ವರ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಳಿಕ ಹೆಸ್ಕಾಂ ಕಚೇರಿಯಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮುಂದುವರೆಸಿದರು. ಸಿಪಿಐ ವಿಜಯಕುಮಾರ, ಪಿಎಸ್‌ಐ ಪ್ರಕಾಶ ಡಿ. ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಕಾಲಕಾಲೇಶ್ವರ ರೈತ ಸಂಘದ ಹೋರಾಟಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಬೆಂಬಲ ನೀಡಿತ್ತು.

ಈ ವೇಳೆ ಪೀರು ರಾಠೋಡ, ಬಸವರಾಜ ಬಂಕದ, ಚಂದ್ರು ರಾಠೋಡ, ದಾನು ರಾಠೋಡ, ಚನ್ನಪ್ಪ ಗುಗಲೋತ್ತರ, ಡಿ.ಜಿ. ಕಟ್ಟಿಮನಿ, ಮಾರುತಿ ಹಾದಿಮನಿ, ಈರಪ್ಪ ರಾಠೋಡ, ಸೋಮಣ್ಣ ಮಾಳೊತ್ತರ, ನಾರಾಯಣಪ್ಪ ರಾಠೋಡ, ಅಮರೇಶ ಮಾಳೊತ್ತರ, ಜೀವನಸಾಬ ಸರ್ಕಾವಸ ಸೇರಿ ಇತರರು ಇದ್ದರು.