ಗದಗ: ಜಿಲ್ಲೆಯಲ್ಲಿ 2027ರ ಜನಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಏಪ್ರಿಲ್ 1ರಿಂದ 15ರ ವರೆಗೆ ಸಾರ್ವಜನಿಕರು ಎಂದರೆ (self enumerators) ಸ್ವಯಂ ಎಣಿಕೆದಾರರು ತಮ್ಮ ಮಾಹಿತಿಯನ್ನು ಸ್ವಯಂ ಆಗಿ ಆನ್‌ಲೈನ್ ಪೋರ್ಟಲ್ (se.census.gov.in) ನಲ್ಲಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜನಗಣತಿ 2027ರ ಕುರಿತು ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ (ಆ್ಯಪ್ ಮೂಲಕ) ನಡೆಯಲಿರುವ ಈ ಜನಗಣತಿ ಕಾರ್ಯಕ್ಕಾಗಿ ಜಿಲ್ಲಾದ್ಯಂತ ಅಧಿಕಾರಿಗಳ ತಂಡ ರಚನೆ ಹಾಗೂ ತರಬೇತಿ ಪ್ರಕ್ರಿಯೆ ಭರದಿಂದ ಸಾಗಿದೆ. ಈ ಬಾರಿಯ ಜನಗಣತಿಯ ವಿಶೇಷತೆಯೆಂದರೆ ಸಾರ್ವಜನಿಕರು ಖುದ್ದಾಗಿ ಪೋರ್ಟಲ್ ಮೂಲಕ ತಮ್ಮ ಮಾಹಿತಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಏ. 1ರಿಂದ ಏ. 15ರ ವರೆಗೆ ಸಾರ್ವಜನಿಕರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದರು.ಏ.16ರಿಂದ ಮೇ 15ರ ಒಂದು ತಿಂಗಳ ಅವಧಿಯಲ್ಲಿ ನಿಯೋಜಿಸಿದ ಗಣತಿದಾರರು ಮೊದಲ ಹಂತದಲ್ಲಿ ಮನೆ ಪಟ್ಟಿ ಕಾರ್ಯಾಚರಣೆಯು ನಡೆಯಲಿದೆ. ಪ್ರತಿ ಮನೆಗೆ ಹಾಜರಾಗಿ ಕುಟುಂಬಸ್ಥರಿಂದ ಗಣತಿದಾರರು ಮಾಹಿತಿ ಸಂಗ್ರಹಿಸಲಿದ್ದು, ಆ ಸಂದರ್ಭದಲ್ಲಿ ಸಾರ್ವಜನಿಕರು ಸಂಬಂಧಿತ ಮಾಹಿತಿಯನ್ನು ಗಣತಿದಾರರಿಗೆ ಒದಗಿಸಬೇಕು. ಗಣತಿದಾರರಿಗೆ ಕುಟುಂಬದ ಮುಖ್ಯಸ್ಥರ ಆಧಾರ ಕಾರ್ಡ್ ಗೆ ಜೊಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ನೀಡಬೇಕು. ಸರಿಯಾದ ಮಾಹಿತಿ ಆಧಾರದ ಮೇಲೆ ದೇಶದ ಅಭಿವೃದ್ಧಿಗೆ ಯೋಜನೆ ರೂಪಿಸಲು ಇದು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಜನಗಣತಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಜನಗಣತಿ ಸಮಿತಿಯು ಹೆಚ್ಚುವರಿ ಪ್ರಧಾನ ಜನಗಣತಿ ಅಧಿಕಾರಿಯಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಜನಗಣತಿ ಅಧಿಕಾರಿಯಾಗಿ ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಯನ್ನು ಉಪವಿಭಾಗ ಜನಗಣತಿ ಅಧಿಕಾರಿ ಹಾಗೂ ಹೆಚ್ಚುವರಿ ಜನಗಣತಿ ಅಧಿಕಾರಿಗಳನ್ನಾಗಿ ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಯೋಜನಾ ನಿರ್ದೇಶಕರು ಮತ್ತು ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಅವರನ್ನು ನೇಮಿಸಲಾಗಿದೆ. ಜಿಲ್ಲಾ ಹಂತದಿಂದ ಪ್ರತಿ ತಾಲೂಕು ತಹಸೀಲ್ದಾರ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ನಗರ ಸಭೆಯ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಅವರನ್ನು ಚಾರ್ಜ್ ಆಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇಬ್ಬರು ಜಿಲ್ಲಾ ಮಟ್ಟದ ತರಬೇತಿದಾರರು, 38 ಕ್ಷೇತ್ರ ಮಟ್ಟದ ತರಬೇತಿದಾರರು ಹಾಗೂ ಪ್ರತಿ ಗ್ರಾಮಾಂತರ ಮತ್ತು ನಗರ ವ್ಯಾಪ್ತಿಗೆ ಒಬ್ಬ ತಾಂತ್ರಿಕ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಸಂಬಂಧಿತ ಚಾರ್ಜ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜನಗಣತಿ ಕಾರ್ಯ ಕೈಗೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ ಎಂದರು.ಜನಗಣತಿ ಕಾರ್ಯದಲ್ಲಿ ಮೊದಲ ಹಂತದಲ್ಲಿ ಮನೆ ಗಣತಿ ಕೈಗೊಳ್ಳಲಾಗುತ್ತಿದ್ದು 150 ರಿಂದ 200 ಕುಟುಂಬಗಳು ಅಥವಾ ಅಂದಾಜು 700- 800 ಜನಸಂಖ್ಯೆಗೆ ಅನುಗುಣವಾಗಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಒಂದು ಗಣತಿ ಬ್ಲಾಕ್ ರಚಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಆಡಳಿತಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಕಾರ್ಯದರ್ಶಿಗಳು, ಕರ ವಸೂಲಿಗಾರರು, ಜಲಗಾರರು, ನಗರ ಪ್ರದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿ ಗ್ರಾಮ, ವಾರ್ಡ್ ತಾಲೂಕು ವಿಭಾಗದಂತೆ ಬ್ಲಾಕ್ ರಚನೆಯ ಕಾರ್ಯನಿರ್ವಹಿಸಿರುತ್ತಾರೆ. ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 1905 ಗಣತಿ ಬ್ಲಾಕ್ ಗಳು ರಚನೆಯಾಗಿವೆ ಎಂದರು.
ತಾಲೂಕುವಾರು ವಿವರಗದಗ–658, ನರಗುಂದ-175, ಶಿರಹಟ್ಟಿ-160, ಮುಂಡರಗಿ-242, ಗಜೇಂದ್ರಗಡ-228, ಲಕ್ಷ್ಮೇಶ್ವರ-196, ರೋಣ -246 ಸೇರಿದಂತೆ 1905 ಗಣತಿ ಬ್ಲಾಕ್ ಗಳು ರಚನೆಯಾಗಿವೆ. ಈ ಜನಗಣತಿಯಲ್ಲಿ ಪ್ರತ್ಯೇಕವಾಗಿ 90 ಕೊಳಗೇರಿ ಪ್ರದೇಶಗಳನ್ನು ಗುರುತಿಸಲಾಗಿದೆ.
ಗಣತಿದಾರರು ಮತ್ತು ಮೇಲ್ವಿಚಾರಕರು
ಗಣತಿ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಶಿಕ್ಷಕರು (ಸರ್ಕಾರಿ ಮತ್ತು ಅನುದಾನಿತ ) ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು, ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು, ನಿಲಯ ಮೇಲ್ವಿಚಾರಕರು ಮತ್ತು ಇತರೇ ಇಲಾಖೆಯ ಪ್ರಥಮ ಮತ್ತು ದ್ವಿತೀಯ ದರ್ಜೆಯ ಸಹಾಯಕರು, ಸಿಬ್ಬಂದಿಯನ್ನು ಗಣತಿದಾರರನ್ನಾಗಿ ಹಾಗೂ ಪಪೂ ಶಿಕ್ಷಣ ಇಲಾಖೆಯ ಉಪನ್ಯಾಸಕರು, ಶಿಕ್ಷಣ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಅಧಿಕಾರಿಗಳನ್ನು ಕನಿಷ್ಟ 6 ಜನ ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನಾಗಿ ನಿಯೋಜಿಸಲಾಗಿದೆ.ಗ್ರಾಮೀಣ ಪ್ರದೇಶದಲ್ಲಿ 298 ಮೇಲ್ವಿಚಾರಕರು, 1480 ಗಣತಿದಾರರು, 1205 ಎಚ್‌ಎಲ್‌ಬಿಗಳು ಕಾರ್ಯನಿರ್ವಹಿಸಲಿದ್ದಾರೆ. ಪಟ್ಟಣ ಪ್ರದೇಶದಲ್ಲಿ 134 ಮೇಲ್ವಿಚಾರಕರು, 744 ಗಣತಿದಾರರು, 701 ಎಚ್.ಎಲ್.ಬಿಗಳು ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಇಬ್ಬರು ಮಾಸ್ಟರ್ ಟ್ರೆನರ್‌ಗಳಿಗೆ ತರಬೇತಿ ನೀಡಲಾಗಿದ್ದು, ಇವರು ತಾಲೂಕು ಮತ್ತು ನಗರ ಮಟ್ಟದ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತಿ ನೀಡಲಿದ್ದಾರೆ. ಗಣತಿದಾರರು ಏ.1 ರೊಳಗೆ ತರಬೇತಿ ಮುಗಿಸಿ, ಆ್ಯಪ್ ಮೂಲಕ ಗಣತಿ ಮಾಡಲು ಸನ್ನದ್ಧರಾಗಲಿದ್ದಾರೆ ಎಂದು ವಿವರಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ, ವಾರ್ತಾಧಿಕಾರಿ ವಸಂತ ಮಡ್ಲೂರ, ಜನಗಣತಿ ಜಿಲ್ಲಾ ನೋಡಲ್ ಅಧಿಕಾರಿ ರಂಜಿತ್ ಜಾಲಾ ಇದ್ದರು.