ಪ್ರತಿ ಎಕರೆಗೆ ₹50 ಸಾವಿರ ಬೆಳೆ ಪರಿಹಾರ ನೀಡಿ

| Published : Aug 22 2025, 01:00 AM IST

ಸಾರಾಂಶ

ಕಳೆದ ಕೆಲ ದಿನಗಳಿಂದ ಸುರಿದ ನಿರಂತರ ಮಳೆಗೆ ಜಿಲ್ಲೆಯಾದ್ಯಂತ ರೈತರು ಬೆಳೆದ ಹೆಸರು, ಉದ್ದು, ಸೋಯಾಬಿನ್, ಶೇಂಗಾ ಸೇರಿದಂತೆ ಇತರ ಬೆಳೆಗಳು ಹಾನಿಗೀಡಾಗಿವೆ. ಇದರಿಂದ ಕೈಗೆ ಬಂದ ತುತ್ತು ರೈತನ ಬಾಯಿಗೆ ಬರದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಪ್ರತಿ ಎಕರೆ ಜಮೀನಿಗೆ ₹50 ಸಾವಿರ ಪರಿಹಾರ ಕೊಡಬೇಕು.

ಧಾರವಾಡ: ನಿರಂತರ ಮಳೆಯಿಂದ ಮುಂಗಾರು ಬೆಳೆಗಳು ಹಾನಿಯಾಗಿದ್ದು ರಾಜ್ಯ ಸರ್ಕಾರ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಘೋಷಿಸಬೇಕು. ಇಲ್ಲದೇ ಹೋದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಮಾಜಿ ಶಾಸಕ ಅಮೃತ ದೇಸಾಯಿ ಹೇಳಿದರು.

ತಾಲೂಕಿನ ಶಿವಳ್ಳಿ ಹಾಗೂ ಹೆಬ್ಬಳ್ಳಿ ಭಾಗದ ರೈತರ ಹೊಲಗಳಿಗೆ ಗುರುವಾರ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದ ಅವರು, ಕಳೆದ ಕೆಲ ದಿನಗಳಿಂದ ಸುರಿದ ನಿರಂತರ ಮಳೆಗೆ ಜಿಲ್ಲೆಯಾದ್ಯಂತ ರೈತರು ಬೆಳೆದ ಹೆಸರು, ಉದ್ದು, ಸೋಯಾಬಿನ್, ಶೇಂಗಾ ಸೇರಿದಂತೆ ಇತರ ಬೆಳೆಗಳು ಹಾನಿಗೀಡಾಗಿವೆ. ಇದರಿಂದ ಕೈಗೆ ಬಂದ ತುತ್ತು ರೈತನ ಬಾಯಿಗೆ ಬರದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಪ್ರತಿ ಎಕರೆ ಜಮೀನಿಗೆ ₹50 ಸಾವಿರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕಿ ಸೀಮಾ ಮಸೂತಿ, ಬಿಜೆಪಿ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಅವರೂ ಕೂಡ ಈ ನಿಯೋಗದಲ್ಲಿದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದರು. ಈ ವೇಳೆ ಅನೇಕ ರೈತರು ಮಾಜಿ ಶಾಸಕ ಅಮೃತ ದೇಸಾಯಿ ಎದುರು ತಮ್ಮ ಅಳಲು ತೋಡಿಕೊಂಡರು.

ಬಿಜೆಪಿ ನಿಯೋಗವು ರೈತರು ಬೆಳೆದ ಹೆಸರು ಬೆಳೆ ವೀಕ್ಷಣೆ ಮಾಡಿತು. ವಿಪರೀತ ಮಳೆಯಿಂದಾಗಿ ಹೆಸರು ಕಾಯಿಗಳು ಗಿಡದಲ್ಲೇ ಮೊಳಕೆಯೊಡೆದಿದೆ. ಸೋಯಾಬಿನ್ ಬೆಳೆಯಲ್ಲಿ ಕಾಯಿಗಳೇ ಇಲ್ಲದ್ದನ್ನು ಗಮನಿಸಿತು. ಈಗಲೇ ಅಧಿವೇಶನ ನಡೆದಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕು. ಅನೇಕ ರೈತರು ಸೋಯಾಬಿನ್ ಬೆಳೆ ಬೆಳೆದಿದ್ದು, ಅದು ಬೀಜದ ಸಮಸ್ಯೆಯಿಂದ ಕಾಯಿಯನ್ನೇ ಬಿಟ್ಟಿಲ್ಲ. ಈ ಬಗ್ಗೆ ಸಮೀಕ್ಷೆ ನಡೆಸಬೇಕು ಹಾಗೂ ಬೆಳೆ ಹಾನಿಯಾದ ಬಗ್ಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಕೆಲಸ ಮಾಡಬೇಕು ಎಂದು ಸ್ಥಳದಲ್ಲೇ ಅಮೃತ ದೇಸಾಯಿ ಕೃಷಿ ಇಲಾಖೆ ಉಪ ನಿರ್ದೇಶಕರಿಗೆ ಕರೆ ಮಾಡಿ ಮನವಿ ಮಾಡಿದರು.

ನಂತರ ಅಮ್ಮಿನಬಾವಿ, ಕರಡಿಗುಡ್ಡ, ಕಲ್ಲೂರು, ಕೊಟಬಾಗಿ, ತಡಕೋಡ, ಖಾನಾಪುರ ರೈತರ ಜಮೀನುಗಳಿಗೆ ತೆರಳಿದ ಬಿಜೆಪಿ ನಿಯೋಗ, ಮಳೆಯಿಂದ ಹಾನಿಗೀಡಾದ ಬೆಳೆಗಳನ್ನು ವೀಕ್ಷಿಸಿ ಈ ಸಂಬಂಧ ಬಿಜೆಪಿ ಒಂದು ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಗೆ ನೀಡುತ್ತದೆ. ಪರಿಹಾರ ಘೋಷಣೆ ಮಾಡುವ ವರೆಗೂ ಡಿಸಿ ಕಚೇರಿ ಮುಂದೆ ಭಜನೆ ಹಚ್ಚಿ ಅನಿರ್ಧಿಷ್ಟಾವಧಿ ಧರಣಿ ನಡೆಸೋಣ ಎಂದು ರೈತರಿಗೆ ಹೇಳಿದರು.