ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕೊಳವೆಬಾವಿ ಮೂಲಕ ಧರೆಗೆ ನೀರು ತಂದು ದೇಶದ ಗಮನ ಸೆಳೆದ ನೀರ್ ಸಾಬ್ ಎಂದೇ ಪರಿಚಿತರಾದ ಅಬ್ದುಲ್ ನಜೀರ್ ಸಾಬ್ ಊರಾದ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಉಚಿತವಾಗಿ ಶುದ್ಧ ಕುಡಿವ ನೀರು ನೀಡಲು ಇಲ್ಲಿನ ಪುರಸಭೆ ಮುಂದಾಗುವುದೇ?ಸುಮಾರು ₹20 ಕೋಟಿಯಷ್ಟು ಪ್ರತಿ ವರ್ಷ ಬಜೆಟ್ ಮಂಡಿಸುವ ಇಲ್ಲಿನ ಪುರಸಭೆ, ಗುಂಡ್ಲುಪೇಟೆ ತಾಲೂಕು ಕೇಂದ್ರ ಸ್ಥಾನ. ದಿನನಿತ್ಯ ಸಾವಿರಾರು ಗ್ರಾಮಾಂತರ ಪ್ರದೇಶದ ಜನರು ಬಂದು ಹೋಗುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು ನೀಡಲು ಆಗಿಲ್ಲ. ಗುಂಡ್ಲುಪೇಟೆಯ ಹೃದಯ ಭಾಗದಲ್ಲಿ ಮೈಸೂರು-ಊಟಿ ಹಾಗೂ ಕೇರಳ ಹೆದ್ದಾರಿ ಹಾದು ಹೋಗಿದೆ. ಪ್ರವಾಸಿಗರು ಹಾಗೂ ಗ್ರಾಮೀಣ ಪ್ರದೇಶದ ಜನರು ಬಂದು ಹೋಗುವ ದಾರಿಯಲ್ಲಿ ಕನಿಷ್ಠ ಇಲ್ಲಿನ ಪುರಸಭೆ ಉಚಿತ ಶುದ್ಧ ಕುಡಿಯುವ ನೀರು ಒದಗಿಸಲು ಇರುವ ಅಡ್ಡಿಯಾದರೂ ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.ಮೈಸೂರು-ಊಟಿ ಹೆದ್ದಾರಿಯಲ್ಲಿ ಸರ್ಕಾರಿ ಕಚೇರಿಗಳಿವೆ. ಆ ಜಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ, ಐದು ರುಪಾಯೋ, ಹತ್ತು ರುಪಾಯೋ ಹಾಕಿ ಮನೆಗೆ ನೀರು ಪಡೆಯಲು ಅವಕಾಶ ಮಾಡಲಿ, ಮತ್ತೊಂದು ಬದಿಯಲ್ಲಿ ಉಚಿತ ಶುದ್ಧ ನೀರು ಕೂಲಿ ಕಾರ್ಮಿಕರು, ಪ್ರವಾಸಿಗರು, ಗ್ರಾಮೀಣ ಪ್ರದೇಶದ ಜನರು ಪಟ್ಟಣಕ್ಕೆ ಬಂದಾಗ ಸಿಗಬೇಕಿದೆ. ಕೊಳವೆ ಬಾವಿ ಮೂಲಕ ನೀರು ಒದಗಿಸಿದ ಅಬ್ದುಲ್ ನಜೀರ್ ಸಾಬ್ ಅವರ ಊರಲ್ಲಿ ಕನಿಷ್ಠ ಕುಡಿಯಲು ಶುದ್ಧ ನೀರು ಕೊಡಲು ಪುರಸಭೆ ಆಡಳಿತ ಮಂಡಳಿ ಇನ್ನಾದರೂ ಚಿಂತನೆ ನಡೆಸಬೇಕಿದೆ.
ದೂರ ದೂರಿಂದ ಬಂದ ಜನರು, ಪ್ರವಾಸಿಗರು, ಹಳ್ಳಿಯಿಂದ ಬಂದ ಜನರಿಗೆ ಶುದ್ಧ ಕುಡಿಯುವ ನೀರು ಕೊಟ್ಟರೆ ಪುರಸಭೆಗೆ ಹೊರೆ ಏನು ಆಗುವುದಿಲ್ಲ.ಪಟ್ಟಣಕ್ಕೆ ಬಂದ ಪ್ರವಾಸಿಗರು ದುಡ್ಡು ಕೊಟ್ಟು ನೀರು ಕುಡಿಯಲು ಬಹುದು? ಆದರೆ ಬಡವರು ಹತ್ತು ರುಪಾಯಿ ಕೊಟ್ಟು ನೀರು ಕುಡಿಯಲು ಆಗದಂತ ಸ್ಥಿತಿಯಲ್ಲಿ ಇದ್ದಾರೆ ಎಂಬುದನ್ನು ಪುರಸಭೆ ಗಮನ ಹರಿಸಬೇಕಿದೆ.ಉಚಿತ ನೀರು ಸಿಗಲಿ:
ಪಟ್ಟಣಕ್ಕೆ ಹಳ್ಳಿಯ ಜನರು, ಕೂಲಿ ಕಾರ್ಮಿಕರು, ದುಡ್ಡಿಲ್ಲದ ಬಡವರು ಕೆಲಸದ ಮೇಲೆ ಬಂದಾಗ ಕನಿಷ್ಠ ಶುದ್ಧ ಕುಡಿವ ನೀರನ್ನು ಉಚಿತವಾಗಿ ಕೊಡುವ ಮನಸ್ಸನ್ನು ಇಲ್ಲಿನ ಪುರಸಭೆ ಸದಸ್ಯರು ಮಾಡಲಿ ಎಂಬುದು ಕನ್ನಡಪ್ರಭದ ಕಳಕಳಿ ಮತ್ತು ಆಶಯವಾಗಿದೆ.ಇಂದು ಪುರಸಭೆ ಬಜೆಟ್:ಗುಂಡ್ಲುಪೇಟೆ ಪುರಸಭೆಯ ಈ ಸಾಲಿನ ಬಜೆಟ್ ಫೆ.೨೮ ರಂದು ಪುರಸಭೆ ಅಧ್ಯಕ್ಷ ಮಧುಸೂದನ್ ಮಂಡಿಸಲಿದ್ದು, ಬಜೆಟ್ ಸಭೆಯಲ್ಲಿ ಉಚಿತ ನೀರು ಕೊಡುವುದಕ್ಕೆ ಸದಸ್ಯರು ಚರ್ಚೆ ನಡೆಸುವರೋ ಕಾದು ನೋಡಬೇಕಿದೆ. ಪಟ್ಟಣದ ಜನನಿಬಿಡ ಸಾರ್ವಜನಿಕ ಸ್ಥಳದಲ್ಲಿ ಉಚಿತ ಶುದ್ಧ ಕುಡಿಯುವ ನೀರು ಕೊಡಲು ಇಲ್ಲಿನ ಪುರಸಭೆ ಸದಸ್ಯರು ಪಕ್ಷಬೇಧ ಮರೆತು ಚರ್ಚಿಸಿ, ನೀರ್ ಸಾಬ್ ಊರಲ್ಲಿ ನೀರು ಕೊಡಲು ಮನಸ್ಸು ಮಾಡಲಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಶೈಲಕುಮಾರ್ ಸಲಹೆ ನೀಡಿದ್ದಾರೆ.
ಶಾಸಕರು ಸೂಚನೆ ನೀಡುವರೇ?:ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕೊಡುಗೈ ದಾನಿ ಎನ್ನುವುದರಲ್ಲಿ ಎರಡು ಮಾತಿಲ್ಲ, ಪುರಸಭೆ ಅವರದೇ ಪಕ್ಷ ಅಧಿಕಾರದಲ್ಲಿದೆ. ಸಾರ್ವಜನಿಕರ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಉಚಿತವಾಗಿ ನೀಡಲು ಸೂಚನೆ ನೀಡಲಿ ಎಂಬುದು ಸಾರ್ವಜನಿಕರ ಸಲಹೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಅಧಿಕಾರ ನಡೆಸುವ ಪುರಸಭೆ ಗುಂಡ್ಲುಪೇಟೆಗೆ ಬರುವ ಸಾರ್ವಜನಿಕರಿಗೆ ಉಚಿತವಾಗಿ ನೀರು ಒದಗಿಸಿ ಎಂದು ಶಾಸಕರು ಹೇಳುವ ಕೆಲಸ ಆಗಲಿ ಎಂಬುದು ಜನರ ಮನವಿ.