ಸಾರಾಂಶ
ಬೇಸಿಗೆ ರಣ ಬಿಸಿಲು ತಾಂಚವವಾಡುತ್ತಿದ್ದು ಜನರನ್ನು ಹೈರಾಣ ಮಾಡುತ್ತಿದೆ. ಆದ್ದರಿಂದ ಅಧಿಕಾರಿಗಳು ಕ್ಷೇತ್ರದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಂಡು ನೀರು ಸರಬರಾಜು ಮಾಡಬೇಕು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು
ಕನ್ನಡಪ್ರಭ ವಾರ್ತೆ ಮಧುಗಿರಿ
ಬೇಸಿಗೆ ರಣ ಬಿಸಿಲು ತಾಂಚವವಾಡುತ್ತಿದ್ದು ಜನರನ್ನು ಹೈರಾಣ ಮಾಡುತ್ತಿದೆ. ಆದ್ದರಿಂದ ಅಧಿಕಾರಿಗಳು ಕ್ಷೇತ್ರದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಂಡು ನೀರು ಸರಬರಾಜು ಮಾಡಬೇಕು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ಕಾಲದಲ್ಲಿ ಉಷ್ಣಾಂಶ ಹೆಚ್ಚಿಗೆ ಇರುವುದರಿಂದ ಕುಡಿಯುವ ಜನ ಹಾಗೂ ಜಾನುವಾರುಗಳಿಗೆ ನೀರಿನ ಅಭಾವ ಹಾಗೂ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸುವ ಜೊತೆಗೆ ಮೇವಿನ ಬೀಜವನ್ನು ಮೇವು ಬೆಳೆಯುವ ರೈತರಿಗೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯುತ್ ಕೊರತೆ ಸಂಭವಿಸದಂತೆ ಕ್ರಮ ಕೈಗೊಳ್ಳಲು ಆದೇಶಿಸಿದರು. ಗ್ರಾಪಂಗಳಲ್ಲಿ ಅವಶ್ಯವಿರುವ ಭಾಗಗಳಲ್ಲಿ ತುರ್ತಾಗಿ ಬೋರ್ ವೆಲ್ ಕೊರೆದು ಪೈಪ್ ಲೈನ್ ಅಳವಡಿಸಿ ಕಾಮಗಾರಿ ಕೈಗೊಂಡು ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ. ತಾಲೂಕಿನಲ್ಲಿ ಬಹುತೇಕ ಎಲ್ಲ ಕೆರೆಗಳಲ್ಲೂ ನೀರಿದ್ದು ಪಂಚಾಯಿತಿ ಅಧಿಕಾರಿಗಳು ಸಮರ್ಥವಾಗಿ ಬಳಸಿ ಕೊಂಡು ಕುಡಿವ ನೀರು ಒದಗಿಸುವಂತೆ ಸಚಿವ ರಾಜಣ್ಣ ಸಲಹೆ ನೀಡಿದರು. ಹನಿಟ್ರ್ಯಾಪ್ ವಿಚಾರದಲ್ಲಿ ನನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ಅಷ್ಠೇ, ನಾನೇನೂ ಹನಿಟ್ರ್ಯಾಪ್‌ಗೆ ಒಳಗಾಗಿಲ್ಲ, ಆ ಪ್ರಯತ್ನ ಯಾರು ಮಾಡಿರಬಹುದು ಎಂಬುದನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿ ಬೇರೆವರಿಗೆ ಈ ರೀತಿ ಆಗದಂತೆ ಮುಂದೆ ಎಚ್ಚರಿಕೆ ವಹಿಸಬೇಕು ಎಂಬುದು ನನ್ನ ಕಳಕಳಿ ಎಂದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶಿರೀನ್ ತಾಜ್, ಇಒ ಲಕ್ಷ್ಮಣ್ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.