ಮಲೇಬೆನ್ನೂರು ಸಮೀಪದ ಹೊಳೆ ಸಿರಿಗೆರೆ ಗ್ರಾಮದಲ್ಲಿ ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ನಡೆಯಿತು. ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್ ಕಾರ್ಯಕ್ರಮ ಉದ್ಘಾಟಿಸಿದರು.

- ಹೊಳೆ ಸಿರಿಗೆರೆಯಲ್ಲಿ ಪ್ರಜಾ ಸೇವಾ ಆಂದೋಲನಕ್ಕೆ ಶಾಸಕ ಬಿ.ಪಿ.ಹರೀಶ್‌ ಚಾಲನೆ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಇಲ್ಲಿಗೆ ಸಮೀಪದ ಹೊಳೆ ಸಿರಿಗೆರೆ ಗ್ರಾಮದಲ್ಲಿ ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ನಡೆಯಿತು. ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್ ಕಾರ್ಯಕ್ರಮ ಉದ್ಘಾಟಿಸಿದರು.

ಮುಖಂಡ ಎಂ.ಜಿ. ಪರಮೇಶ್ವರಗೌಡ್ರು ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಗ್ರಾಮದ ಕೆರೆ ಸಂಪೂರ್ಣ ಬತ್ತಿಹೋಗಿದ್ದು, ದನ-ಕರುಗಳಿಗೆ ಕುಡಿಯಲು ನೀರು ಇಲ್ಲದಂತಾಗಿದೆ. ಕೆರೆ ಸುತ್ತ ಮುತ್ತ ಸುಮಾರು 65 ಎಕರೆ ಸರ್ಕಾರಿ ಜಮೀನು ಇದ್ದು ಒತ್ತುವರಿ ಆಗಿದೆ. ಶೀಘ್ರವೇ ಸರ್ವೇ ಮಾಡಬೇಕು. ಕೆರೆಯ ಹೂಳು ತೆಗೆದು ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಬರ ಪರಿಹಾರ ತಲುಪಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರೈತ ಮುಖಂಡ ಹಾಳೂರು ನಾಗರಾಜ್ ಮಾತನಾಡಿ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಮುಂತಾದವು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಬೇಕು ಎಂದರು.

ಕಾರ್ಯಕ್ರಮದಲ್ಲಿ 51 ಅರ್ಜಿಗಳು ಸ್ವಿಕೃತಿಗೊಂಡಿವೆ. ತಾಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ 37, ಕಂದಾಯ ಇಲಾಖೆ 04, ಸರ್ವೆ 04, ಕೆಎಸ್ಸಾರ್ಟಿಸಿ 01, ಲೋಕೋಪಯೋಗಿ 02, ಆಹಾರ ಇಲಾಖೆ 01, ಪೊಲೀಸ್ ಇಲಾಖೆಗೆ 01 ಅರ್ಜಿಗಳು ಸ್ವಿಕೃತಿಗೊಂಡಿವೆ. ಆದ್ಯತೆ ಮೇರೆಗೆ ಮನವಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ತಹಸೀಲ್ದಾರ್ ಸಂತೋಷ್ ಕುಮಾರ್ ತಿಳಿಸಿದರು.

ಹೊಳೆ ಸಿರಿಗೆರೆ ಗ್ರಾಮ ಪಂಚಾಯಿತಿ ಪಿಡಿಒ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಮಲತಾ, ಸರ್ಕಲ್ ಇನ್‌ಸ್ಪೆಕ್ಟರ್ ಸುರೇಶ ಸಗರಿ, ಅರೋಗ್ಯ ಅಧಿಕಾರಿ ಅಬ್ದುಲ್ ಖಾದರ್, ಕೆಇಬಿ. ಎಂಜಿನಿಯರ್ ಲಕ್ಷ್ಮಣ್, ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ, ಅಕ್ಷರ ದಾಸೋಹ ಸಹ ನಿರ್ದೇಶಕ ವೀರೇಶ್, ಆರ್ ಐ ಆನಂದ್, ಮಹಿಳಾ ಮತ್ತು ಮಕ್ಕಳ ಅಧಿಕಾರಿ, ತೋಟಗಾರಿಕೆ ಅಧಿಕಾರಿಗಳು, ಸರ್ವೇ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮುಖಂಡರಾದ ಬೂದಿಹಾಳ್ ಹಾಲೇಶಪ್ಪ.ನಿವೃತ್ತ ಸೈನಿಕ ಪರುಶುರಾಮ್ ಇದ್ದರು.

- - -

(ಬಾಕ್ಸ್‌)

* ಪ್ರಚಾರದ ಕೊರತೆ: 60ರಿಂದ 70 ಜನ ಮಾತ್ರ ಭಾಗಿ

ಗ್ರಾಮದಲ್ಲಿ ಸುಮಾರು 140 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳಿವೆ. 40 ಮಹಿಳಾ ಸ್ವಸಹಾಯ ಸಂಘಗಳಿವೆ. 2011ರ ಜನಗಣತಿ ಪ್ರಕಾರ 5540 ಜನಸಂಖ್ಯೆ ಇದೆ. ಆದರೆ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸುಮಾರು 60 ರಿಂದ 70 ಜನರು ಮಾತ್ರ ಭಾಗವಹಿಸಿದ್ದು ಮಾತ್ರ ವಿಪರ್ಯಾಸ.

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ತೆರಳಲು ಬಸ್ ಕೊರತೆ ಇದೆ, ಗ್ರಾಮದಲ್ಲಿ ಎಲ್ಲೆಂದರಲ್ಲಿ ಮದ್ಯ ಮಾರಾಟ ಆಗ್ತಾ ಇದೆ. ಇಂತಹ ಹತ್ತು ಹಲವು ಸಮಸ್ಯೆಗಳ ಬಗ್ಗೆ ಸಮಗ್ರ ಮನವಿ ಸಲ್ಲಿಸಬಹುದಿತ್ತು. ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಪ್ರಚಾರದ ಕೊರತೆಯಿಂದ ಅಪೂರ್ಣವಾಗಿದೆ ಎಂದು ಗ್ರಾಮದ ಮಹಿಳಾ ಸ್ವಸಹಾಯ ಸಂಘದ ಎಸ್ ಪಿ ಆರ್ ಜ್ಯೋತಿ, ಮಂಜುಳಾ ತಿಳಿಸಿದರು.

ನಮಗೆ ಎರಡ್ಮೂರು ದಿನಗಳ ಮೊದಲೇ ಪ್ರಜಾ ಸೇವಾ ಆಂದೋಲನ ಮಾಹಿತಿ ದೊರಕಿದ್ದರೆ ಎಲ್ಲಾ ನಮ್ಮ ಯೋಜನೆಯ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಾಹಿತಿ ನೀಡುತ್ತಿದ್ದೆವು. ನಮಗೂ ಮಾಹಿತಿ ಕೊರತೆ ಇದ್ದುದರಿಂದ ತಿಳಿಸಲು ಸಾಧ್ಯವಾಗಿಲ್ಲ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಸ್ ಪಿ ಮಂಜುಳಾ, ಮೇಲ್ವಿಚಾರಕರಾದ ರಂಗಸ್ವಾಮಿ, ನಾಗರಾಜ್ ಸಾಲಕಟ್ಟಿ ಪತ್ರಿಕೆಗೆ ಮಾಹಿತಿ ಹಂಚಿಕೊಂಡರು.

ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಹೆಚ್ಚಿನ ಪ್ರಚಾರದ ಅವಶ್ಯಕತೆ ಇದೆ. ಗ್ರಾಮಾಡಳಿತ, ತಾಲೂಕು ಆಡಳಿತ ಪ್ರಜಾ ಸೇವಾ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಭಾಗವಹಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದು ಗ್ರಾಮದ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದರು.

- - -

-ಫೋಟೋ: ಕಾರ್ಯಕ್ರಮವನ್ನು ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸಿದರು.