ರೈತರಿಗೆ ಎಕರೆಗೆ ₹25 ಸಾವಿರ ಬರ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸಬೇಕು. ತೊಗರಿ, ಹತ್ತಿ ಸಹಿತ ವಿವಿಧ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಯುವ ಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆಯ ಪದಾಧಿಕಾರಿಗಳು ಶುಕ್ರವಾರ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ ರೈತರಿಗೆ ಎಕರೆಗೆ ₹25 ಸಾವಿರ ಬರ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಕಬ್ಬಿಗೆ ಪ್ರತಿ ಟನ್‌ಗೆ ₹5,500 ದರ ನಿಗದಿಪಡಿಸಬೇಕು. ತೊಗರಿ, ಹತ್ತಿ ಸಹಿತ ವಿವಿಧ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಯುವ ಶಕ್ತಿ ರೈತರ ಮಕ್ಕಳ ಮಹಾಶಕ್ತಿ ಸಂಘಟನೆಯ ಪದಾಧಿಕಾರಿಗಳು ಶುಕ್ರವಾರ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಬರಗಾಲ ಘೋಷಣೆ ಮಾಡಿದ್ದರೂ, ರೈತರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ. ಹೀಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಅವಣ್ಣಗೌಡ ಎನ್. ಪಾಟೀಲ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ನ್ಯಾಯಸಮ್ಮತ ಹಾಗೂ ಏಕರೂಪದ ದರ ಜಾರಿಗೊಳಿಸಬೇಕು. ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಕಾರ್ಖಾನೆಗಳೇ ಭರಿಸಬೇಕು. ಕಾರ್ಖಾನೆಗಳಲ್ಲಿ ತೂಕದ ಮೋಸ ತಡೆಯಲು ಪ್ರತ್ಯೇಕ ತೂಕದ ಸೇತುವೆ (ವೇ ಬ್ರಿಡ್ಜ್) ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಕಾರ್ಖಾನೆಗಳ ಇಳುವರಿ ಪ್ರಮಾಣವನ್ನು (ರಿಕವರಿ) ಪ್ರತಿ ತಿಂಗಳು ರೈತರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಪಾರದರ್ಶಕವಾಗಿ ಪರಿಶೀಲಿಸಬೇಕು. ಬರಗಾಲದ ಸಂದರ್ಭ ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು. ರೈತರಿಗೆ ಪ್ರತಿದಿನ ಏಳು ಗಂಟೆ ಸಮರ್ಪಕ ವಿದ್ಯುತ್ ಪೂರೈಸಬೇಕು. ವಿದ್ಯುತ್ ಪೂರೈಕೆಯಲ್ಲಿ ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೀಲಕಂಠರಾವ್ ಬಿರಾದಾರ, ಶಿವಕುಮಾರ ಸಾಗರ, ಭಗವಂತರಾಯ ಮುದಗಲ್, ನಾಗರತ್ನ ಕಡಿಮನಿ, ರತ್ನಮ್ಮ ಎಸ್. ಪಾಟೀಲ, ಹಣಮಂತರಾಯ ಅಷ್ಟೋಜಿ, ದೇವಿಕಾ ಪಾಟೀಲ, ಚಂದ್ರಕಲಾ ಚಿಂಚೋಳಿ, ಪ್ರಿಯಾಂಕಾ ಪಾಟೀಲ್, ರೇಣುಕಾ ಕಪಾಳ, ಗಣೇಶ ಗುತ್ತೇದಾರ, ಕುಶಾಲ ಬಸವಪಟ್ಟಣ, ಶಹಾಬುದ್ದೀನ್ ಟಾಕಳಿ, ನಬಿಸಾಬ್, ಶರಣಪ್ಪ, ಶಿವಪುತ್ರ, ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ: 2026–27ನೇ ಸಾಲಿನಲ್ಲಿ ಬರಗಾಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶಾಲಾ ಶುಲ್ಕ ರದ್ದುಪಡಿಸಬೇಕು. ಬರಗಾಲದಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಹಾಗೂ ಇತರ ಕಾರ್ಮಿಕರಿಗೆ ₹25 ಸಾವಿರ ಪರಿಹಾರ ನೀಡಬೇಕು. ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರೆಯಲು ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು. ಎಥನಾಲ್ ಕೋಟಾದಲ್ಲಿ ರೈತರಿಗೆ ಶೇ 5ರಷ್ಟು ಪಾಲು ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.