ಧಾರವಾಡ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿದ್ದು, ಈವರೆಗೂ ಯಾವುದೇ ಬರ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ಕೂಡಲೇ ಶಾಶ್ವತ ಬರ ಕಾಮಗಾರಿ ಶುರು ಮಾಡಬೇಕು.

ಧಾರವಾಡ:

ತಾಲೂಕಿನ ರೈತರಿಗೆ ಬರ ಹಾಗೂ ಬೆಳೆ ನಷ್ಟದ ಹಿನ್ನೆಲೆಯಲ್ಲಿ ಪ್ರತಿ ಎಕರೆಗೆ ₹ 50 ಸಾವಿರ ಪರಿಹಾರ ನೀಡುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ತಾಲೂಕಿನ ರೈತರು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಶನಿವಾರ ಬಿಜೆಪಿ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ತಾಲೂಕಿನ ಶಿವಳ್ಳಿ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಎತ್ತು-ಚಕ್ಕಡಿಗಳನ್ನು ತೆಗೆದುಕೊಂಡು ಮೆರವಣಿಗೆ ಮೂಲಕ ಆಗಮಿಸಿದ ರೈತರು ಜ್ಯುಬಿಲಿ ವೃತ್ತದಲ್ಲಿ ಕೆಲ ಹೊತ್ತು ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಶಿವಳ್ಳಿ, ಹೆಬ್ಬಳ್ಳಿ, ತಲವಾಯಿ, ಕನಕೂರ, ಚಂದನಮಟ್ಟಿ, ಕವಲಗೇರಿ, ಅಮ್ಮಿನಬಾವಿ, ಮರೇವಾಡ ಕ್ರಾಸ್‌, ಮುರುಘಾಮಠ, ಜ್ಯೂಬಿಲಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸರ್ಕಾರದ ಗಮನ ಸೆಳೆದರು.

ಇಡೀ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿದ್ದು, ಈವರೆಗೂ ಯಾವುದೇ ಬರ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ಕೂಡಲೇ ಶಾಶ್ವತ ಬರ ಕಾಮಗಾರಿ ಶುರು ಮಾಡಬೇಕು. ಆರ್ಥಿಕ ಸಂಕಷ್ಟದ ರೈತರಿಗೆ ಹಿಂಗಾರು ಬಿತ್ತನೆಗೆ ಉಚಿತ ಬೀಜ-ಗೊಬ್ಬರ ನೀಡಬೇಕು. ಹೊಲ ಹಾಗೂ ಗ್ರಾಮಗಳಲ್ಲಿ ವಾಸಿಸುವ ರೈತರ ಮನೆಗಳಿಗೆ ಸಿಂಗಲ್‌ ಫೇಸ್‌ ಮೂಲಕ ದಿನದ 24 ಗಂಟೆ ವಿದ್ಯುತ್‌ ನೀಡಬೇಕು. ದನಕರುಗಳಿಗೆ ಉಚಿತ ಮೇವು ವಿತರಿಸಬೇಕು. ಬಾಕಿ ಇರುವ ಹಾಲಿನ ಪ್ರೋತ್ಸಾಹ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ವಿಧವಾ, ಅಂಗವಿಕಲರ ವೇತನ ಹಾಗೂ ವೃದ್ಧಾಪ್ಯ ವೇತನ ಸೇರಿ ಬಾಕಿ ಇರುವ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಫಲಾನುಭವಿಗಳಿಗೆ ತಕ್ಷಣ ನೀಡಬೇಕು. ಮಾವಿನ ಬೆಳೆಗಾರರಿಗೆ ಬೆಳೆ ವಿಮೆಯಲ್ಲಿ ಅನ್ಯಾಯವಾಗಿದ್ದು ಸರಿಪಡಿಸುವುದು ಸೇರಿದಂತೆ ಒಟ್ಟು 12 ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ, ಮುಖಂಡರಾದ ಅಶೋಕ ದೇಸಾಯಿ, ಈರೇಶ ಅಂಚಟಗೇರಿ, ಗಂಗಾಧರ ಪಾಟೀಲ ಕುಲಕರ್ಮಿ, ಗುರುನಾಥ ಗೌಡರ, ಶಂಕರ ಶೆಳಕೆ, ಶಂಕರ ಕೋಮಾರ ದೇಸಾಯಿ, ಶಂಕರ ಮುಗದ, ಮಹೇಶ ಎಲಿಗಾರ, ಶಿವಾನಂದ ಗುಂಡಗೋವಿ, ನಾಗಪ್ಪ ಗಾಣಿಗೇರ, ನಿತೀನ ಇಂಡಿ ಸೇರಿದಂತೆ ನೂರಾರು ರೈತರು ಇದ್ದರು.