ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಕಳೆದ ಒಂದುವರೆ ತಿಂಗಳಿನಿಂದ ಶಿರಾ ತಾಲೂಕಿನಲ್ಲಿ ಸರಿಯಾಗಿ ಮಳೆ ಬಾರದೆ ಇರುವುದರಿಂದ ರೈತರು ಬೆಳೆದಿರುವ ಬೆಳೆಗಳು ಒಣಗಿ ಹೋಗುತ್ತಿವೆ. ಅಡಿಕೆ ಮತ್ತು ತೆಂಗಿನ ಗಿಡಗಳು ಸಹ ಒಣಗುವ ಸ್ಥಿತಿ ಬಂದಿವೆ. ಇಂತಹ ಸ್ಥಿತಿಯಲ್ಲಿ ಕಳೆದ ೧೫ ದಿನಗಳಿಂದ ಬೆಸ್ಕಾಂ ಇಲಾಖೆ ರೈತರ ಪಂಪ್ ಸೆಟ್‌ಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಕೂಡಲೇ ವಿದ್ಯುತ್ ಸಮಸ್ಯೆ ಪರಿಹರಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಧನಂಜಯರಾಧ್ಯ ಒತ್ತಾಯಿಸಿದರು. ಅವರು ನಗರದ ಬೆಸ್ಕಾಂ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಮಾತನಾಡಿದರು. ಶಿರಾ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜು ಮಾಡಲು ಎರಡು ಟಿಸಿಗಳು ಇವೆ ಇದರಲ್ಲಿ ಒಂದು ಟಿಸಿ ಕೆಟ್ಟು ಹೋಗಿದ್ದು, ಇನ್ನೊಂದು ಟಿಸಿಯಲ್ಲಿ ತಾಲೂಕಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲು ಆಗುತ್ತಿಲ್ಲ. ಕನಿಷ್ಟ ೭ ಗಂಟೆಗಳ ಕಾಲ ವಿದ್ಯುತ್ ಕೊಡಲು ಬೆಸ್ಕಾಂ ಇಲಾಖೆಗೆ ಆಗುತ್ತಿಲ್ಲ. ರೈತರು ಮಳೆ ಇಲ್ಲದೆ ಇರುವುದರಿಂದ ಕೊಳವೆ ಬಾವಿಗಳ ನೀರಿನಿಂದ ಬೆಳೆಗಳನ್ನು ಕಾಪಾಡಿಕೊಳ್ಳಬೇಕಿದೆ. ಆದ್ದರಿಂದ ರೈತರಿಗೆ ತುರ್ತಾಗಿ ಕಾಲಕ್ಕೆ ಸರಿಯಾಗಿ ಕೊಡಬೇಕು. ರಾತ್ರಿ ವೇಳೆಯಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ಹೈನುಗಾರಿಕೆಗೆ ಸಮಸ್ಯೆ ಉಂಟಾಗಿದೆ. ನಿರಂತರ ವಿದ್ಯುತ್ ಸರಿಯಾಗಿ ಕೊಡುತ್ತಿಲ್ಲ. ಕ್ಷೇತ್ರದ ಶಾಸಕರು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.ದಲಿತ ಮುಖಂಡ ಜೆ.ಎನ್.ರಾಜಸಿಂಹ ಮಾತನಾಡಿ ಶಿರಾ ತಾಲೂಕಿನಲ್ಲಿ ೨೦ ಸಾವಿರ ಎಕರೆ ಜಮೀನಿನಲ್ಲಿ ರೈತರು ಬೀಜದ ಹತ್ತಿ ಬೆಳೆ ಬೆಳೆದಿದ್ದಾರೆ. ಇಡೀ ಶಿರಾ ತಾಲೂಕಿಗೆ ವಿದ್ಯುತ್ ನೀಡಲು ಎರಡು ಟಿಸಿ ಇದ್ದು ಅದರಲ್ಲಿ ಒಂದು ಸಮಸ್ಯೆ ಉಂಟಾಗಿದೆ. ಇನ್ನೊಂದರಲ್ಲಿ ತಾಲೂಕಿಗೆ ವಿದ್ಯುತ್ ನೀಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು, ಶಾಸಕರು ತುರ್ತಾಗಿ ಟಿಸಿ ಯನ್ನು ನೀಡಬೇಕು. ರೈತರನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಸಣ್ಣದ್ಯಾಮಯ್ಯ, ಹಸಿರು ಸೇನೆ ಅಧ್ಯಕ್ಷ ಗಿರೀಶ್, ದೇವರಾಜು ಬಟ್ಟಿಗಾನಹಳ್ಳಿ, ಸೋರೆಕುಂಟೆ ಲಕ್ಕಣ್ಣ, ರಾಮಣ್ಣ, ತೇರುಮಲ್ಲಪ್ಪ, ನಾಗರಾಜು ಸೇರಿದಂತೆ ಹಲವರು ಹಾಜರಿದ್ದರು.