ಸಾರಾಂಶ
ಹೆಚ್ಚು ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ತುರ್ತು ಪರಿಹಾರ ಒದಗಿಸಬೇಕು. ಪೂರ್ಣ ಮನೆ ಬಿದ್ದಿರುವ ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲು ಕ್ರಮ ವಹಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ತಹಶೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು.
ಹಾನಗಲ್ಲ: ಹೆಚ್ಚು ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ತುರ್ತು ಪರಿಹಾರ ಒದಗಿಸಬೇಕು. ಪೂರ್ಣ ಮನೆ ಬಿದ್ದಿರುವ ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲು ಕ್ರಮ ವಹಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ತಹಸೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು. ಇಲ್ಲಿ ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸ್ಮಶಾನ ಇಲ್ಲದೇ ಇರುವ ಗ್ರಾಮಗಳ ಬಗ್ಗೆ ಪರಿಶೀಲಿಸಿ, ಸ್ಮಶಾನ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಿ. ಸರ್ಕಾರಿ ಜಾಗ ಲಭ್ಯ ಇಲ್ಲದಿದ್ದರೆ ಖಾಸಗಿ ಜಾಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾಳಜಿ ವಹಿಸಿ. ಭೂಸುಧಾರಣಾ ಸಂಕಲನದಡಿ ಬಾಕಿ ಇರುವ ಸರಕಾರ ಕಡಿಮೆ, ಷರತ್ತು ಕಡಿಮೆ ಬಾಕಿ ಪ್ರಕರಣಗಳಿಂದ ರೈತರು ತೊಂದರೆ ಅನುಭವಿಸುತ್ತಿದ್ದು, ಆದ್ಯತೆ ಮೇರೆಗೆ ಇತ್ಯರ್ಥ ಪಡಿಸಿ ಎಂದರು.
ಕಂದಾಯ ಗ್ರಾಮ, ಉಪಗ್ರಾಮ ಪ್ರಸ್ತಾವನೆ ಸಲ್ಲಿಸಿದ ಹಾಗೂ ಹೊಸದಾಗಿ ಸಲ್ಲಿಸುವ ಪ್ರಕರಣಗಳ ಕುರಿತು ಮಾಹಿತಿ ಪಡೆದು, ಅಂತಿಮ ಅಧಿಸೂಚನೆಯಾದ ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳಲ್ಲಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಪೂರ್ವಾನುಮತಿ ಪಡೆಯದೇ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ನೋಟಿಸ್ ನೀಡಿ, ಕಡ್ಡಾಯವಾಗಿ ಪೂರ್ವಾನುಮತಿ ಪಡೆದು ಕಟ್ಟಡ ನಿರ್ಮಾಣಕ್ಕೆ ಮುಂದಾಗುವಂತೆ ಕ್ರಮ ವಹಿಸಬೇಕು. ತಪ್ಪಿದ್ದಲ್ಲಿ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಿ ಎಂದು ಮುಖ್ಯಾಧಿಕಾರಿ ಜಗದೀಶ ವೈ.ಕೆ. ಅವರಿಗೆ ಸೂಚಿಸಿದರು. ಸಾರ್ವಜನಿಕರ ದಾಖಲೆಗಳನ್ನು ಪೂರೈಸುವಲ್ಲಿ ಮತ್ತೆ ವಿಳಂಬ ಮಾಡಲಾಗುತ್ತಿರುವ ಬಗ್ಗೆ ದೂರು ಹೆಚ್ಚುತ್ತಿವೆ. ಪರಿಶೀಲನೆ ಕೈಗೊಂಡು ನಿರ್ಲಕ್ಷ್ಯ ವಹಿಸಿರುವ ಸಿಬ್ಬಂದಿಗೆ ಎಚ್ಚರಿಕೆ ನೀಡಿ. ಸಾರ್ವಜನಿಕರ ಕಾರ್ಯದಲ್ಲಿ ಅನಗತ್ಯ ವಿಳಂಬ ಉಂಟಾಗದಂತೆ ಗಮನ ಹರಿಸಿ. ೨೦೧೫-೧೬ನೇ ಸಾಲಿನಿಂದ ಬಾಕಿ ಇರುವ ೧೧೯ ಆಶ್ರಯ ಮನೆಗಳ ಕೇಂದ್ರ ಸರ್ಕಾರದ ಸಹಾಯಧನ ಬಿಡುಗಡೆಗೆ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಬೇಕು. ಪ್ರಸಕ್ತ ಸಾಲಿನ ಉಳಿದ ಆಶ್ರಯ ಮನೆಗಳ ಪಟ್ಟಿ ಸಿದ್ಧಪಡಿಸಿ ಕೇಂದ್ರದ ಸಹಾಯಧನ ಬಿಡುಗಡೆಗೆ ಕಳುಹಿಸಿ ಎಂದು ಸೂಚಿಸಿದರು.