ಉದ್ಯೋಗ ಅರಸಿ ಗ್ರಾಮೀಣ ಜನರು ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೇಳುವ ಪ್ರತಿಯೊಬ್ಬರಿಗೂ ಉದ್ಯೋಗ ಒದಗಿಸಬೇಕು. ಯೋಜನೆಯ ಪಟ್ಟಿಯಿಂದ ಕೈಬಿಟ್ಟಿರುವ ಅರ್ಹರ ಹೆಸರುಗಳನ್ನು ನಿಯಮಾನುಸಾರ ಪರಿಶೀಲಿಸಿ ಸೇರ್ಪಡೆಗೊಳಿಸುವುದರ ಜತೆಗೆ ತಾಂತ್ರಿಕ ತೊಡಕುಗಳನ್ನು ನಿವಾರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.

ಕುಷ್ಟಗಿ: ಉದ್ಯೋಗ ಅರಸಿ ಗ್ರಾಮೀಣ ಜನರು ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೇಳುವ ಪ್ರತಿಯೊಬ್ಬರಿಗೂ ಉದ್ಯೋಗ ಒದಗಿಸಬೇಕು. ಯೋಜನೆಯ ಪಟ್ಟಿಯಿಂದ ಕೈಬಿಟ್ಟಿರುವ ಅರ್ಹರ ಹೆಸರುಗಳನ್ನು ನಿಯಮಾನುಸಾರ ಪರಿಶೀಲಿಸಿ ಸೇರ್ಪಡೆಗೊಳಿಸುವುದರ ಜತೆಗೆ ತಾಂತ್ರಿಕ ತೊಡಕುಗಳನ್ನು ನಿವಾರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.

ಕುಷ್ಟಗಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಸಲ್ಲಿಸಿದ ಮನವಿ ಪರಿಶೀಲಿಸಿ ಜಿಪಂ ಸಿಇಒ ವರ್ಣಿತ್ ನೇಗಿ ಅವರೊಂದಿಗೆ ಚರ್ಚಿಸಿದರು. ಮಳೆಯ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.

ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆಗಳ ಅಗಲೀಕರಣ, ವಿಜಯನಗರ ಕಾಲದ ಗುಡಿ-ಗೋಪುರಗಳ ಒತ್ತುವರಿ ತಡೆ ಹಾಗೂ ಉದ್ಯಾನಗಳ ಒತ್ತುವರಿ ತೆರವುಗೊಳಿಸುವಂತೆ ನಗರ ಹಿತರಕ್ಷಣಾ ವೇದಿಕೆ ಸದಸ್ಯರು ಮನವಿ ಸಲ್ಲಿಸಿದರು.

ದೋಟಿಹಾಳ ಗ್ರಾಮದಲ್ಲಿ ಮುಖ್ಯ ರಸ್ತೆ ಅಗಲೀಕರಣ ಹಾಗೂ ಸೇತುವೆ ದುರಸ್ತಿಗೆ ಗ್ರಾಮಸ್ಥರು ಕೋರಿದರು.

ಸಂದೀಪ ನಗರದ ನಿವಾಸಿಗಳು ನಿವೇಶನಗಳ ಹಕ್ಕುಪತ್ರ ವಿತರಿಸುವಂತೆ, ಬಸವರಾಜ ಗಾಣಿಗೇರ ಅವರು ವಿಶೇಷಚೇತನ ಮಕ್ಕಳ ಪುನರ್ವಸತಿಗೆ ಸಿಎ ನಿವೇಶನ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು. ಸೇಬಿನಕಟ್ಟಿ ಸೇರಿದಂತೆ ವಿವಿಧ ಗ್ರಾಮಸ್ಥರು ಪಹಣಿ ದೋಷ ಸರಿಪಡಿಸುವಂತೆ ಹಾಗೂ ಗುಡ್ಡದದೇವಲಾಪುರದವರು ವೃದ್ಧಾಪ್ಯ ವೇತನ ಮಂಜೂರಾತಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಧೃತಿ ಮಂಜುನಾಥ ದಾನಿ ಅವರಿಗೆ ಸುಕನ್ಯಾ ಸಮೃದ್ಧಿ ಪಾಸ್‌ಬುಕ್ ಹಾಗೂ ತಾವರಗೇರಾ ಹೋಬಳಿಯ ಯಮನೂರ ಅವರಿಗೆ ಅಂಗವಿಕಲರ ಮಾಸಿಕ ಪಿಂಚಣಿ ಆದೇಶ ಪತ್ರ ವಿತರಿಸಲಾಯಿತು. ಆರೋಗ್ಯ ಶಿಬಿರದಲ್ಲಿ ಸಚಿವರು ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಮಾಡಿಸಿಕೊಂಡರು.