ಸಾರಾಂಶ
- ಹೊನ್ನಾಳಿ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಡಿ.ಜಿ.ಶಾಂತನಗೌಡ ಸೂಚನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕೃಷಿಗೆ ಉತ್ಪನ್ನಗಳು ಪೂರೈಕೆ, ರಸ್ತೆ, ವಿದ್ಯುತ್, ಸಾರಿಗೆ, ಹಾಸ್ಟೆಲ್ ನಿರ್ವಹಣೆ, ಶಿಕ್ಷಣ, ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳ ಕಲ್ಪಿಸಬೇಕು. ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು, ರಸ್ತೆಗಳ ಪಕ್ಕ ಸಸಿಗಳ ನೆಟ್ಟು ಪೋಷಿಸಬೇಕು. ಎಲ್ಲ ಇಲಾಖೆಗಳಲ್ಲೂ ಸರ್ಕಾರದಿಂದ ಸಿಗುವ ಅನುದಾನ ಬಳಸಿ, ಜನರಿಗೆ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಬೇಕಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಸೂಚನೆ ನೀಡಿದರು.ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಇಲಾಖೆಗಳ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸಗಳನ್ನು ಪಟ್ಟಿ ಮಾಡಿದರೆ ಆದ್ಯತೆ ಮೇರೆಗೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲಾಗುವುದು. ಕೆಲವು ಇಲಾಖೆಗಳಲ್ಲಿ ಹಣವಿದ್ದರೂ ಕಾಮಗಾರಿಗಳನ್ನು ನಿರ್ವಹಿಸಲು ಅಧಿಕಾರಿಗಳು ಮೀನ-ಮೇಷ ಎಣಿಸುತ್ತಿದ್ದಾರೆ. ಆದಷ್ಟು ಬೇಗ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳಲ್ಲಿನ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಗುಣಮಟ್ಟದ ಕೆಲಸ ನಿರ್ವಹಿಸುವಂತೆ ಪಿಡ್ಲ್ಯೂಡಿ ಎಇಇ ಕಣುಮಪ್ಪ ಅವರಿಗೆ ಸೂಚಿಸಿದರು. ಬೆಸ್ಕಾಂ ಮತ್ತು ಅರಣ್ಯ ಇಲಾಖೆಯವರು ಸಮನ್ವಯತೆಯಿಂದ ಕೆಲಸ ಮಾಡುವಂತೆ ಎಇಇ ಜಯಪ್ಪ, ಅರಣ್ಯ ಇಲಾಖೆಯ ಬಿ.ಎಂ.ಷಣ್ಮುಖ ಮತ್ತು ಕಿಶೋರ್ ಅವರಿಗೆ ಶಾಸಕರು ತಿಳಿಹೇಳಿದರು.ಪಿ.ಎಚ್.ಸಿ.ಗಳಲ್ಲಿ ನರ್ಸ್‍ಗಳ ಕೊರತೆಯಿದೆ. ಈ ಬಗ್ಗೆ ಕ್ರಮ ಜರುಗಿಸಬೇಕು. ಪಿ.ಎಚ್.ಸಿ.ಗಳ ರಿಪೇರಿಯಿದ್ದರೆ ಅವುಗಳ ಮಾಹಿತಿ ತಿಳಿಸಿದರೆ ಅನುದಾನ ಬಿಡುಗಡೆ ಮಾಡಬಹುದು. ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ದೂರುಗಳು ಬಾರದಂತೆ ಕ್ರಮ ವಹಿಸಿ, ಸಂಪೂರ್ಣ ಮಾಹಿತಿ ನೀಡಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸೋಮ್ಲಾ ನಾಯ್ಕ್ ಅವರಿಗೆ ಸೂಚಿಸಿದರು.
ಬೇಸಿಗೆ ಪ್ರಾರಂಭವಾಗಿದ್ದು ಅವಳಿ ತಾಲೂಕುಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಕಾರ್ಯಪ್ರವೃತ್ತರಾಗಬೇಕು. ಅಂಗನವಾಡಿ ಹುದ್ದೆಗಳಿಗೆ ಶೀಘ್ರ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲು ಕ್ರಮ ಜರುಗಿಸಬೇಕು ಎಂದು ಎಸಿಡಿಪಿಒ ಅವರಿಗೆ ಸೂಚಿಸಿದರು.ಸಿಪಿಐ ಸುನಿಲ್‍ಕುಮಾರ್ ಮಾತನಾಡಿ, ಪಟ್ಟಣದಲ್ಲಿ ಸುಬಾಹೋ ಇ-ಬೀಟ್ ಆನ್ ಲೈನ್ ಅಳವಡಿಕೆ ಮಾಡಿದ್ದು, 48 ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಣೆ ಮಾಹಿತಿ ಪಡೆಯುವ ಬಗ್ಗೆ ಕ್ರಮ ಜರುಗಿಸಲಾಗಿದೆ ಎಂದು ಶಾಸಕರ ಗಮನಕ್ಕೆ ತಂದರು. ವಿದ್ಯಾವಂತರೇ ಆನ್‍ಲೈನ್ ವಂಚನೆಗೊಳಗಾಗುತ್ತಿದ್ದು, ಇದರ ಬಗ್ಗೆ ಗ್ರಾಪಂಗಳಲ್ಲಿ ಬೀಟ್ ಪೊಲೀಸ್‍ಗಳಿಗೆ ಪಿಡಿಒಗಳು ಸಹಕಾರ ನೀಡಿ, ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.
ಮೊಟ್ಟೆಯ ವಿತರಣೆ ಬಗ್ಗೆ ಎಲ್ಲ ಶಾಲೆಗಳಲ್ಲೂ ಸಮಸ್ಯೆಗಳು ತಲೆದೋರುತ್ತಿದೆ. ಮೊಟ್ಟೆಯ ದರವನ್ನು ₹1 ಹೆಚ್ಚಳ ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಶಾಸಕರಿಗೆ ಬಿಇಒ ನಿಂಗಪ್ಪ ಮನವಿ ಮಾಡಿದರು.ತಾಪಂ ನಾಮನಿರ್ದೇಶಿತ ಸದಸ್ಯ ಕಾಯಿ ಬಸವರಾಜ್, ಇ.ಒ.ಗಳಾದ ಎಚ್.ವಿ.ರಾಘವೇಂದ್ರ, ಎಂ.ಆರ್.ಪ್ರಕಾಶ್, ಬಿಸಿಎಂ ಅಧಿಕಾರಿ ಮೃತ್ಯುಂಜಯ ಸ್ವಾಮಿ, ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಪ್ರತಿಮಾ, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕಿ ರೇಖಾ, ಯು.ಟಿ.ಪಿ. ಎಇಇ ಮಂಜುನಾಥ್, ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ, ಜಿಪಂ ಎಇಇ ಮೋತಿಲಾಲ್, ಎಂಜಿನಿಯರ್ ಮಂಜುನಾಥ್, ಸಿಡಿಒ ಎ.ಜಿ.ನವೀನ್ ಕುಮಾರ್, ನ್ಯಾಮತಿ ಪುರಸಭಾ ಮುಖ್ಯಾಧಿಕಾರಿ ಗಣೇಶ ರಾವ್, ಕೆ-ಶಿಪ್ ಎಇಇ ಹನಮಂತ ನಾಯ್ಕ್, ಪಶು ಸಂಗೋಪನಾ ಇಲಾಖೆಯ ವಿಶ್ವನಟೇಶ್, ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
- - - -22ಎಚ್.ಎಲ್.ಐ3: ಹೊನ್ನಾಳಿ ತಾಪಂ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆಯಲ್ಲಿ ತ್ರೈಮಾಸಿಕಿ ಕೆಡಿಪಿ.ಪ್ರಗತಿ ಪರಿಶೀನಾ ಸಭೆ ನಡೆಯಿತು.