ಸಾರಾಂಶ
ಕನ್ನಡ ಪ್ರಭ ವಾರ್ತೆ ಮದ್ದೂರು
ಕಾಂಗ್ರೆಸ್ ಭವನ ಬಹುಬೇಗ ನಿರ್ಮಾಣವಾಗಲು ಪ್ರತಿಯೊಬ್ಬ ಕಾರ್ಯಕರ್ತ ಧನ ಸಹಾಯ ನೀಡಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಶುಕ್ರವಾರ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದ ಬಳಿ ಕಾಂಗ್ರೆಸ್ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಂಡ್ಯ ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿಲ್ಲ. ಆದರೆ, ಮದ್ದೂರಿನಲ್ಲಿ ಕಾಂಗ್ರೆಸ್ ಭವನದ ಸ್ವಂತ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡುತ್ತಿರುವುದು ಅತೀವ ಸಂತಸ ತಂದಿದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಪ್ರತಿಯೊಂದು ಜಿಲ್ಲಾ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ ಎಂದರು.ಮದ್ದೂರಿನಲ್ಲಿ ಕೆ.ಎಂ.ಉದಯ್ ಅವರು ಮುತುವರ್ಜಿ ವಹಿಸಿ ಶಾಸಕರಾದ ಕೇವಲ ಎರಡು ವರ್ಷಗಳಲ್ಲೆ ಕಾಂಗ್ರೆಸ್ ಕಟ್ಟಡ ನಿರ್ಮಾಣಕ್ಕೆ ತಮ್ಮ ಸ್ವಂತ ನಿವೇಶನ ನೀಡುವ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.
ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ದಾನವಾಗಿ ನೀಡಿದ ನಿವೇಶನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸ್ವತಃ ಬಂದು ಪಕ್ಷದ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ. ಸಿಎಂ, ಡಿಸಿಎಂ ಅವರು 1.250 ಕೋಟಿಗೂ ಹೆಚ್ಚು ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿ ಕೈ ಜೋಡಿಸಿದ್ದಾರೆ. ಇನ್ನೂ 34 ತಿಂಗಳ ಅಧಿಕಾರವಿದ್ದು ಮದ್ದೂರು ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದರು.ಕಾಂಗ್ರೆಸ್ ಭವನದ ನಿರ್ಮಾಣ ಕಾರ್ಯ ಒಂದು ವರ್ಷದಲ್ಲಿ ಮುಗಿಯಬೇಕು. ರಾಜ್ಯದ ಭವನಗಳ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಅನುದಾನ ಕೊಡುವುದಾಗಿ ಹೇಳಿದ್ದಾರೆ. ಅದರಂತೆ ಇಲ್ಲಿನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿ ಮೀರಿ ನಿಮ್ಮ ಕೈಲಾದಷ್ಟು ಧನ ಸಹಾಯ ಮಾಡಬೇಕು ಎಂದರು.
ನಿಮ್ಮ ಹಣದಿಂದಲೇ ಭವನ ನಿರ್ಮಾಣವಾಗುತ್ತದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಸೇರಿದಂತೆ ಎಲ್ಲರೂ ಶ್ರಮ ಹಾಗೂ ಮುತುವರ್ಜಿ ವಹಿಸಿ ಕಟ್ಟಡವನ್ನು ಒಂದು ವರ್ಷದೊಳಗೆ ನಿರ್ಮಾಣವಾಗುವಂತೆ ವ್ಯವಸ್ಥೆ ಮಾಡಬೇಕು ಎಂದರು.ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ರಾಜ್ಯದಲ್ಲಿ 100 ಜಿಲ್ಲಾ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನಮ್ಮ ನಾಯಕರಾದ ಡಿಕೆಶಿ ಅವರು ಮುಂದಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಪ್ರಾರಂಭಕ್ಕೆ ಡಿ.ಕೆ.ಸುರೇಶ್ ಅವರ ಸಲಹೆಯೂ ಕಾರಣವಾಗಿದೆ ಎಂದರು.
ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿ ಮುಂಬರುವ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಪಕ್ಷದ ಎಲ್ಲಾ ಅಭ್ಯರ್ಥಿಗಳನ್ನು ಗೆಲುವಿಗೆ ಕಾರಣರಾಗಬೇಕು ಎಂದರು.ಶಾಸಕ ಕೆ.ಎಂ.ಉದಯ್, ವಿನುತಾ ಉದಯ್, ಪುರಸಭಾಧ್ಯಕ್ಷೆ ಕೋಕಿಲ ಅರುಣ್ ಕುಮಾರ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸರ್ವಮಂಗಳ, ಸಚಿನ್ ಸಿದ್ದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚೆಲುವರಾಜ್, ರಾಜೀವ್, ಜಿಲ್ಲಾ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಮಹಿಳಾ ಅಧ್ಯಕ್ಷೆ ಮಮತಾ ಶಂಕರೇಗೌಡ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಚಿದಂಬರ, ಸಿ.ಡಿ.ಗಂಗಾಧರ್, ಕೆ.ಆರ್.ಮಹೇಶ್, ಸಿ.ಟಿ.ಶಂಕರ್, ಕೀರ್ತಿ, ಹಿತೇಶ್ ಇತರರಿದ್ದರು.