ಸಾರಾಂಶ
ಕಳೆದ ವರ್ಷ ಅತಿವೃಷ್ಟಿ, ಈ ವರ್ಷ ಅನಾವೃಷ್ಟಿಯಿಂದ ಬೆಳೆಗಳು ಹಾಳಾಗಿ ರೈತರ ಬದುಕು ದುಸ್ತರವಾಗಿದೆ. ಕಳೆದ ವರ್ಷದ ಪರಿಹಾರ ಈವರೆಗೂ ಎಲ್ಲ ರೈತರಿಗೆ ತಲುಪಿಲ್ಲ. ತಕ್ಷಣ ಸರ್ಕಾರ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಪರಿಹಾರ ನೀಡಬೇಕು.
ಅಳ್ನಾವರ:
ಅತಿವೃಷ್ಟಿ, ಅನಾವೃಷ್ಟಿ ಪರಿಹಾರ, ಸಮರ್ಪಕ ವಿದ್ಯುತ್ ಪೂರೈಕೆ, ನೀರಾವರಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ತಾಲೂಕಿನ ರೈತರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕ ಮತ್ತು ರೈತ ಸಂಘ ಹಸಿರು ಸೇನೆಯ ಸದಸ್ಯರು ಇಲ್ಲಿನ ಎಪಿಎಂಸಿಯಿಂದ ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ತೆರಳಿ ಕೆಲಹೊತ್ತು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಕಳೆದ ವರ್ಷ ಅತಿವೃಷ್ಟಿ, ಈ ವರ್ಷ ಅನಾವೃಷ್ಟಿಯಿಂದ ಬೆಳೆಗಳು ಹಾಳಾಗಿ ರೈತರ ಬದುಕು ದುಸ್ತರವಾಗಿದೆ. ಕಳೆದ ವರ್ಷದ ಪರಿಹಾರ ಈವರೆಗೂ ಎಲ್ಲ ರೈತರಿಗೆ ತಲುಪಿಲ್ಲ. ತಕ್ಷಣ ಸರ್ಕಾರ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಆಣೆವಾರಿ ಸಮೀಕ್ಷೆ ಅವೈಜ್ಞಾನಿಕವಾಗಿದ್ದು ರೈತರಿಗೆ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ರೈತರ ನೆರವಿಗೆ ಬರಬೇಕು ಎಂದ ಪ್ರತಿಭಟನಾಕಾರರು, ಹೆಸ್ಕಾಂ ವಿದ್ಯುತ್ ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿದೆ. ಏನಾದರೂ ದುರಸ್ತಿಗೆ ಬಂದರೆ ರೈತರಿಂದ ಹಣ ಸುಲಿಗೆ ಮಾಡುತ್ತಾರೆ. ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಇದ್ದು ಬೆಳೆಗಳಿಗೆ ತಾಗಿ ಬೆಳೆ ನಷ್ಟವಾಗುತ್ತಿದೆ. ಪ್ರಾಣಿಹಾನಿ ಸಂಭವಿಸುವ ಮೊದಲೇ ಇವುಗಳನ್ನು ದುರಸ್ತಿ ಮಾಡಬೇಕೆಂದು ಆಗ್ರಹಿಸಿದರು.ಪಹಣಿಯಲ್ಲಿನ ಲೋಪ ತಿದ್ದುಪಡಿಗೆ ಆಂದೋಲನ ನಡೆಸಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು, ಆಗ್ರೋ ಕೇಂದ್ರ, ರಸಗೊಬ್ಬರ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಹಾಗೂ ಗೊಬ್ಬರ ಮಾರಾಟ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ತಾಲೂಕಿನ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಹಾಗೂ ಕಾಳಿ ನದಿಯಿಂದ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆಯನ್ನು ತಾಲೂಕಿನ ಎಲ್ಲ ಗ್ರಾಮಗಳಿಗೂ ವಿಸ್ತರಿಸಬೇಕೆಂದು ಮನವಿಯಲ್ಲಿ ತಿಳಿಸಿದರು.ಮನವಿ ಸ್ವೀಕರಿಸಿದ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಮಂಜು ಗೌರಿ, ಉತ್ತರ ಪ್ರಾಂತದ ವಿವೇಕ ಮೋರೆ, ಅಲ್ಲಾಭಕ್ಷ ಕುಂದುಬೈನವರ, ಸಿದ್ದಯ್ಯ ಹಿರೇಮಠ, ಉಮೇಶ ದುಸಗೇಕರ, ಸುರೇಶ ಕಂಚನೋಳಕರ, ಮಹೇಶ ಬುಡರಕಟ್ಟಿ, ಬಸವರಾಜ ಕಿಲೋಸ್ಕರ, ನಿಂಗಪ್ಪ ಮಾಧನಭಾವಿ, ವಾಸುದೇವ ಕಲ್ಲಾಪುರ, ಶ್ರೀಧರ ನರಗುಂದ ಸೇರಿದಂತೆ ತಾಲೂಕಿನ ನೂರಾರು ರೈತರು ಹಾಜರಿದ್ದರು.