ಸಾರಾಂಶ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಹೆರಿಗೆ ಸೌಲಭ್ಯ, ಸೂಕ್ತ ಚಿಕಿತ್ಸೆ ಆರೋಗ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡಬೇಕು ಎಂದು ವೈದ್ಯರಿಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಸೂಚಿಸಿದರು.ಇಲ್ಲಿನ 100 ಹಾಸಿಗೆ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಅವರು, ಹೆರಿಗೆಗಾಗಿ ಆಸ್ಪತ್ರೆಗೆ ಬರುವ ಬಿಪಿಎಲ್ ಕಾರ್ಡ್‌ಹೊಂದಿದ ಗರ್ಭಿಣಿಯರಿಗೆ ಉಚಿತವಾಗಿ ಸೌಲಭ್ಯ ನೀಡಬೇಕು. ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಇಲ್ಲಿ ಸಂಖ್ಯೆ ಕುಸಿತ ಕಂಡಿದೆ. ಪ್ರತಿ ತಿಂಗಳು ಕನಿಷ್ಠ 200 ಪ್ರಕರಣ ದಾಖಲಾಗಬೇಕು. ಆದರೆ, ಕೇವಲ 50ಕ್ಕೆ ಸೀಮಿತವಾಗಿದೆ. ಸಹಜ ಹೆರಿಗೆ ಪ್ರಕರಣ ದಾಖಲಾಗುತ್ತಿದ್ದು, ಆಶಾ ಕಾರ್ಯಕರ್ತೆಯರು ಮನವೊಲಿಸಿ ಗರ್ಭಿಣಿಯರನ್ನು ಕರೆ ತರುವ ಕೆಲಸ ಮಾಡಬೇಕಿದೆ ಎಂದರು.ಜಿಲ್ಲೆಯ ವಿವಿಧ ತಾಲೂಕುಗಳ ಆಸ್ಪತ್ರೆಗಳಿಂದ ವೈದ್ಯರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ, ಹೂವಿನಹಡಗಲಿಯಿಂದ ಮಾತ್ರ ಯಾವುದೇ ಬೇಡಿಕೆಯೇ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ, ಆಸ್ಪತ್ರೆಯಲ್ಲಿ ಸಿಬ್ಬಂದಿ, ಔಷಧ ಸೇರಿದಂತೆ ಏನೇ ಕೊರತೆ ಇದ್ದರೇ ಕೂಡಲೇ ಬೇಡಿಕೆ ಪಟ್ಟಿ ಸಲ್ಲಿಸಿ. ತಕ್ಷಣವೇ ಜಿಲ್ಲಾಡಳಿತದಿ೦ದ ಖರೀದಿಸಿ ನೀಡಲಾಗುವುದು ಎಂದರು.
ಔಷಧಗಳನ್ನು ಹೊರಗೆ ಖರೀದಿಸಬೇಡಿ, ವರ್ಷದ ಬೇಡಿಕೆ ಮತ್ತು ಖರೀದಿ ಕುರಿತು ಮಾಹಿತಿ ಕಳಿಸಿ, ಬಳಕೆದಾರರ ನಿಧಿಯಲ್ಲಿ ಅವಕಾಶವಿದೆ ಎಂದು ಬೇಕಾಬಿಟ್ಟಿಯಾಗಿ ಉಪಯೋಗಿಸಬಾರದು. ಹಳೆ ಡ್ರಿಪ್ ಸ್ಟ್ಯಾಂಡ್ ತೆಗೆದು ಹೊಸದನ್ನು ಬಳಸಿ. ಆಡಳಿತ ವೈದ್ಯಾಧಿಕಾರಿಗಳು ಇವುಗಳ ಮೇಲೆ ನಿಗಾ ಇಡಬೇಕು. ವೈದ್ಯರು, ಸ್ಟಾಫ್ ನರ್ಸ್ ಹುದ್ದೆಗಳನ್ನು ಭರ್ತಿ ಮಾಡಿಕೊಂಡರೆ ತಾವು ಜಿಲ್ಲಾ ಖನಿಜ ನಿಧಿಯಿಂದ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು.ಆಸ್ಪತ್ರೆ ಸ್ವಚ್ಚತೆ ಕುರಿತು ಸಿಬ್ಬಂದಿ ವಿರುದ್ಧ ಹರಿಹಾಯ್ದ ಜಿಲ್ಲಾಧಿಕಾರಿ, ಜಿಲ್ಲೆಯ ಎಲ್ಲ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳು ಸ್ವಚ್ಚವಾಗಿವೆ. ನಿಮಗೆ ಏನು ಸೌಲಭ್ಯ ಬೇಕು ಎಂದು ಕ್ರಿಯಾಯೋಜನೆ ಸಲ್ಲಿಸಿದರೆ ಕೂಡಲೇ ಅನುಮೋದನೆ ನೀಡುತ್ತೇನೆ ಎಂದರು.
ಚುನಾವಣೆ ಮುಗಿದ ಬಳಿಕ ಅರವಳಿಕೆ ವಿಭಾಗ, ವಾರ್ಮರ್, ಫೋಟೋ ತೆರಪಿ ಯಂತ್ರ ಸೌಲಭ್ಯ ಸೇರಿದಂತೆ ಅಗತ್ಯ ಸೌಲಭ್ಯಕ್ಕೆ ಅನುಮತಿ ನೀಡುತ್ತೇವೆ ಎಂದು ಹೇಳಿದರು.ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಗಳೂರು ಸೇರಿ ಇತರ ನಗರ ಪ್ರದೇಶಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳೂ ಸಿಗುತ್ತಿವೆ. ಸಾರ್ವಜನಿಕರು ಆಸ್ಪತ್ರೆಗೆ ಬರುವುದಕ್ಕೆ ಉತ್ತಮ ಚಿಕಿತ್ಸೆ ಕಾರಣವಾಗುತ್ತದೆ. ರೋಗಿಗಳು ಖಾಸಗಿ ಆಸ್ಪತ್ರೆ ಗಳಿಗೆ ಹೋಗಿ ದುಬಾರಿ ಹಣ ಕೊಟ್ಟು ಚಿಕಿತ್ಸೆ ಪಡೆಯುವುದಕ್ಕಿಂತ ಉಚಿತವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ ಎಂದರು.