ಒತ್ತಡದ ಕೆಲಸದ ನಡುವೆಯೂ ಉತ್ತಮ ಸೇವೆ ಸಲ್ಲಿಸಿ: ನಿವೃತ್ತ ಪಿ.ಎಸ್.ಐ. ವಿಜಯಕುಮಾರ್

| Published : Apr 03 2025, 12:33 AM IST

ಒತ್ತಡದ ಕೆಲಸದ ನಡುವೆಯೂ ಉತ್ತಮ ಸೇವೆ ಸಲ್ಲಿಸಿ: ನಿವೃತ್ತ ಪಿ.ಎಸ್.ಐ. ವಿಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ಸೇವೆ ಒತ್ತಡದ ಸೇವೆ, ಆ ನಡುವೆಯು ನಾವು ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸೇವೆ ಸಲ್ಲಿಸಬಹುದು ಎಂದು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ನಿವೃತ್ತ ಪಿ.ಎಸ್.ಐ. ವಿಜಯಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪೊಲೀಸ್ ಸೇವೆ ಒತ್ತಡದ ಸೇವೆ, ಆ ನಡುವೆಯು ನಾವು ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸೇವೆ ಸಲ್ಲಿಸಬಹುದು ಎಂದು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ನಿವೃತ್ತ ಪಿ.ಎಸ್.ಐ. ವಿಜಯಕುಮಾರ್ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ದ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ನಮ್ಮ ಅರಿವಿಗೆ ಬಾರದೇ ಎಷ್ಟೋ ಉತ್ತಮ ಕೆಲಸಗಳನ್ನು ಮಾಡಿರುತ್ತೇವೆ, ಅವು ನಾವು ನಿವೃತ್ತರಾದ ಮೇಲೆಯೇ ಗೊತ್ತಾಗುವುದು ಎಂದರು.

ನಮ್ಮ ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಸಲ್ಲಿಸುವಾಗ ಶ್ರದ್ಧೆ, ಶಿಸ್ತು, ವಿಧೇಯತೆಯನ್ನು ಮೈಗೂಡಿಸಿಕೊಂಡಾಗ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಬಹುದು ಎಂದರು.

ಹಿಂದೆ ಪೊಲೀಸ್ ಇಲಾಖೆಯಲ್ಲಿ ಯಾವುದೇ ಯೋಜನೆಗಳಿರಲಿಲ್ಲ, ನಮ್ಮ ಮೇಲಾಧಿಕಾರಿಗಳ ಮನವಿ ಹಾಗೂ ಒತ್ತಡದ ಕಾರಣ ಇಂದು ಆರೋಗ್ಯ ಭಾಗ್ಯದಡಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸಾ ಸೇವೆ ಸಿಗುವಂತಾಗಿದೆ, ಕೆಲವು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ, ಇದರ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಬೇಕು ಎಂದರು.

ಜಿಲ್ಲೆಯಲ್ಲಿ ಹೊರಗಡೆಯಿಂದ ಬಂದ ಪೊಲೀಸರಿಗೆ ವಸತಿ ಸೌಲಭ್ಯದ ಕೊರತೆ ಇದೆ, ಇದನ್ನು ನಿವಾರಿಸಿಕೊಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿದರು.

ಡಾ. ಬಿ.ಟಿ. ಕವಿತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದ ನಂತರ ಆಪ್ತ ಗೆಳತಿ, ಜನಸ್ನೇಹಿ ಪೊಲೀಸ್, ಗಡಿಭಾಗದಲ್ಲಿ ಗಸ್ತು ಹೆಚ್ಚು ಮಾಡಿ, ಶೀಘ್ರವಾಗಿ ಕಳ್ಳರ ಬಂಧನ, ಅಪಘಾತಗಳ ಪತ್ತೆ ಹಚ್ಚುವಿಕೆ ಸೇರಿ ಹಲವು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಸಿಬ್ಬಂದಿಯ ಕಲ್ಯಾಣಕೋಸ್ಕರ ವಿಶೇಷ ಗಮನಹರಿಸಿದ್ದಾರೆ ಎಂದರು.

ಕರ್ತವ್ಯದಲ್ಲಿದ್ದಾಗ ನಮ್ಮ ಮೇಲಾಧಿಕಾರಿಗಳ ಸಹಕಾರ ಅತಿಮುಖ್ಯ. ಅದಕ್ಕಾಗಿ ನಾವು ವಿಧೇಯತೆಯನ್ನು ಮೈಗೂಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ಶ್ರಧ್ಧೆ ಮತ್ತು ಶಿಸ್ತಿನಿಂದ ಕರ್ತವ್ಯ ನಿರ್ವಹಿಸಿ ಉತ್ತಮ ಸೇವೆ ಸಲ್ಲಿಸಿ, ನಿವೃತ್ತರಾಗಬಹುದು ಎಂದರು.

ಎಸ್ಪಿ ಡಾ. ಬಿ.ಟಿ.ಕವಿತಾ ಪ್ರಸ್ತಾವಿಸಿ, ೧೯೮೪ ರ ಏಪ್ರಿಲ್ ೨ ರಂದು ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ಸಾರ್ವಜನಿಕ ಸೇವೆ ಸಲ್ಲಿಸಿದ ಉತ್ತಮ ನಿವೃತ್ತ ಪೊಲೀಸ್ ಅಧಿಕಾರಿಗಳ ಸೇವೆಯನ್ನು ಸ್ಮರಿಸಿ ಗೌರವಿಸಲಾಗುತ್ತದೆ ಎಂದರು.

ಪೊಲೀಸ್ ಧ್ವಜ ವಿತರಣೆಯಿಂದ ಶೇಖರಣೆಯಾಗುವ ಸಂಪನ್ಮೂಲದಿಂದ ಪೊಲೀಸರ ಕಲ್ಯಾಣ ನಿಧಿಗೆ ಬಳಕೆ ಮಾಡಲಾಗುವುದು, ೨೦೨೪-೨೫ನೇ ಸಾಲಿನಲ್ಲಿ ಪೊಲೀಸರು ಮತ್ತು ಅವರ ಕುಟುಂಬದ ವೈದ್ಯಕೀಯ ವೆಚ್ಚಕ್ಕಾಗಿ ೭,೫೩,೭೪೭ ರು.ಗಳನ್ನು ವೆಚ್ಚ ಮಾಡಲಾಗಿದೆ ಎಂದರು.

ಪೊಲೀಸ್ ಸೇವೆಯನ್ನು ನಿರ್ವಹಿಸಿ ನಿವೃತ್ತಿಯಾಗಿ ಪುರಸ್ಕಾರ ಪಡೆಯುತ್ತಿರುವ ಪೊಲೀಸ್ ಅಧಿಕಾರಿಗಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವುದರ ಮುಖಾಂತರ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತರಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಮೋನಾರೋತ್, ಅಡಿಷನಲ್ ಎಸ್ಪಿ ಶಶಿಧರ್, ಡಿವೈಎಸ್ಪಿಗಳಾದ ಲಕ್ಷ್ಮಯ್ಯ, ಧರ್ಮೇಂದರ್‌, ಸೋಮಣ್ಣ, ಜಿಲ್ಲೆಯ ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಮಹಿಳಾ ಪೊಲೀಸ್ ತುಕಡಿ ಸೇರಿದಂತೆ ೮ ಪೊಲೀಸ್ ತುಕಡಿಗಳು ಪಥ ಸಂಚಲನ ನಡೆಸಿ, ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದವು. ರಾಷ್ಟ್ರ ಧ್ವಜ ಮತ್ತು ಪೊಲೀಸ್ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಲಾಯಿತು.