ಬಡವರಿಗೆ ಸರ್ಕಾರದ ಸೌಲಭ್ಯ ಒದಗಿಸಿ: ಮಂಕಾಳ ವೈದ್ಯ ಸೂಚನೆ

| Published : Oct 02 2024, 01:09 AM IST

ಸಾರಾಂಶ

ಅಡಕೆ ಬೆಳೆಗೆ ತಾಗಿರುವ ರೋಗ ನಿವಾರಣೆಗೆ ಸಂಬಂಧಪಟ್ಟ ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ವಿಸ್ತರಣಾ ಕೇಂದ್ರದ ತಜ್ಞರಿಂದ ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಮಂಕಾಳ ವೈದ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕಾರವಾರ: ಜಿಲ್ಲೆಯ ಜನಸಾಮಾನ್ಯರು, ಅಂಗನವಾಡಿ, ಶಾಲೆ, ವಸತಿ ಶಾಲೆ, ವಸತಿನಿಲಯದ ಬಡ ವಿದ್ಯಾರ್ಥಿಗಳಿಗೆ ಸರ್ಕಾರದ ಎಲ್ಲ ಜನಪರ ಯೋಜನೆ ಹಾಗೂ ಕಾರ್ಯಕ್ರಮದ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ಮೂಲಕ ಯಾರೊಬ್ಬರೂ ವಂಚಿತರಾಗದಂತೆ ಅಧಿಕಾರಿಗಳು, ಸಿಬ್ಬಂದಿ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಅಡಕೆ ಬೆಳೆ ಪ್ರದೇಶ ಹೆಚ್ಚಿದ್ದು, ಪ್ರಸಕ್ತ ಸಾಲಿನಲ್ಲಿ ನಿರಂತರ ಮಳೆಯಿಂದ ಅಡಕೆ ಬೆಳೆಗೆ ಕೊಳೆ ರೋಗ, ಎಲೆಚುಕ್ಕಿ ರೋಗ, ಬೇರುಹುಳು ರೋಗ ಹೆಚ್ಚಾಗಿ ಬೆಳೆ ನಾಶವಾಗುತ್ತಿದೆ. ಅಡಕೆ ಬೆಳೆಗೆ ತಾಗಿರುವ ರೋಗ ನಿವಾರಣೆಗೆ ಸಂಬಂಧಪಟ್ಟ ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ವಿಸ್ತರಣಾ ಕೇಂದ್ರದ ತಜ್ಞರಿಂದ ಪರಿಶೀಲಿಸಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಜನಸಾಮಾನ್ಯರ ಸಮಸ್ಯೆಗಳ ನಿವಾರಣೆಗಾಗಿ ಗ್ರಾಮ, ಪಪಂಗಳ ಹಾಗೂ ನಗರಸಭೆಗಳ ಸ್ಥಳೀಯ ಆಡಳಿತ ಮಂಡಳಿಯಿಂದ ಅವಶ್ಯಕತೆಯಿದ್ದರೆ ಮಾತ್ರ ಜಿಲ್ಲೆಯ ಸಂಬಂಧಿತ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಭೆಗಳಲ್ಲಿ ಭಾಗವಹಿಸುವಂತೆ ನೋಟಿಸ್‌ ನೀಡುತ್ತಿದ್ದು, ಪ್ರತಿಯೊಬ್ಬ ಅಧಿಕಾರಿಗಳು ತಕ್ಷಣ ಸ್ಪಂದಿಸುವ ಮೂಲಕ ಸಭೆ, ಸ್ಥಳಗಳಿಗೆ ಕಡ್ಡಾಯವಾಗಿ ತೆರಳಲೇಬೇಕು. ಶಾಲೆ, ಅಂಗನವಾಡಿ, ವಸತಿ ಶಾಲೆ, ವಸತಿನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುವವರು ಅತ್ಯಂತ ಬಡ ಕುಟುಂಬದ ಮಕ್ಕಳಾಗಿದ್ದು, ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ವಿಳಂಬವಾಗದಂತೆ ಸಮಯಕ್ಕೆ ಸರಿಯಾಗಿ ಜಿಲ್ಲೆಯ ಸಂಬಂಧಪಟ್ಟ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಲುಪಿಸಬೇಕು. ಅಧಿಕಾರಿಗಳು, ಸಿಬ್ಬಂದಿ ಸರ್ಕಾರಿ ಸೌಕರ್ಯಗಳನ್ನು ಬಡ ಮಕ್ಕಳಿಗೆ ತಲುಪಿಸುವಲ್ಲಿ ತೋರುವ ಬೇಡವಾಬ್ದಾರಿ, ತಾರತಮ್ಯ, ವಿಳಂಬ ನೀತಿಯನ್ನು ಸಹಿಸಲಾಗದು ಎಂದರು.ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವಂತಹ ಅಂಗನವಾಡಿ ಕಟ್ಟಡಗಳಿಗೆ ಸ್ಥಳ ಒದಗಿಸಲು ಅಧಿಕಾರಿಗಳು ಮಾತುಕತೆ ನಡೆಸಿ ಅಡೆತಡೆ ಇದ್ದರೆ ನಿವಾರಿಸಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕು. ಅಕ್ಷರ ದಾಸೋಹ, ಬಿಸಿಯೂಟ ಕಾರ್ಯಕ್ರಮದಡಿ ಅಂಗನವಾಡಿ, ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸಬೇಕು. ಹಾಗೇ ಯಾವುದೇ ಲೋಪದೋಷ ಉಂಟಾಗದಂತೆ ಪೌಷ್ಟಿಕ ಆಹಾರ ಮತ್ತು ವಾರಪೂರ್ತಿ ಮೊಟ್ಟೆ ವಿತರಿಸುವ ಕಾರ್ಯವಾಗಬೇಕು ಎಂದರು.ಆರೋಗ್ಯ ಮತ್ತು ಕುಟುಂಬ ಇಲಾಖೆ ವ್ಯಾಪ್ತಿಯ ಜಿಲ್ಲಾ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅನಾರೋಗ್ಯದ ಬಳಲುವ ಸಾಮಾನ್ಯ ಜನರು ಬಂದರೆ ಯಾವುದೇ ತೊಂದರೆಯಾಗದಂತೆ ಲಭ್ಯ ಚಿಕಿತ್ಸಾ ಸೌಕರ್ಯ ಸುಗಮವಾಗಿ ದೊರಕಿಸಬೇಕು. ಜನರು ಚಿಕಿತ್ಸೆಗಾಗಿ ಅಲೆದಾಡುವುದನ್ನು ಸಹಿಸಲಾಗದು. ಈ ಕುರಿತು ಸಾರ್ವಜನಿಕರಿಂದ ದೂರುಗಳೇನಾದರೂ ಬಂದರೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಶಾಸಕರಾದ ಭೀಮಣ್ಣ ನಾಯ್ಕ್, ಶಾಂತಾರಾಮ ಸಿದ್ದಿ, ಗ್ಯಾರಂಟಿ ಯೋಜನೆಗಳ ಬೆಳಗಾವಿ ವಿಭಾಗದ ರಾಜ್ಯ ಕಮಿಟಿಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಮತ್ತಿತರರು ಇದ್ದರು.