ಸಾರಾಂಶ
ಕಾರವಾರ: ಜಿಲ್ಲೆಯ ಎಲ್ಲ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಾಣ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಂಡು ಎಲ್ಲರಿಗೂ ವಸತಿ ಸೌಕರ್ಯ ಕಲ್ಪಿಸಬೇಕು ಎಂದು ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚಿಸಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನಗರ ವ್ಯಾಪ್ತಿಯಲ್ಲಿ ವಾಸದ ಮನೆಗಳನ್ನು ನಿರ್ಮಿಸುವ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಬೇಕು. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ ನೌಕರರಿಗೆ ಹಂಚಿಕೆ ಮಾಡಬೇಕು. ಮನೆ ನಿರ್ಮಾಣಕ್ಕೆ ಜಾಗದ ಕೊರತೆಯಿದ್ದಲ್ಲಿ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರರನ್ನು ಸಂಪರ್ಕಿಸುವಂತೆ ಸೂಚಿಸಿದರು.ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮ್ಯಾನ್ ಹೋಲ್, ಮಲದ ಗುಂಡಿಗಳನ್ನು ಸ್ವಚ್ಛಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರವನ್ನು ಬಳಸಬೇಕು. ಈ ಕಾರ್ಯಗಳಿಗೆ ಯಾವುದೇ ಕಾರಣಕ್ಕೂ ಪೌರ ಕಾರ್ಮಿಕರನ್ನು ಬಳಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಗೆ ಪ್ರತಿ ತಿಂಗಳು ನಿಗದಿತ ಅವಧಿಯೊಳಗೆ ವೇತನವನ್ನು ಪಾವತಿಸುವಂತೆ ಮತ್ತು ಇಪಿಎಫ್ ಮತ್ತು ಇಎಸ್ಐ ಕಡಿತ ಮಾಡಿ ಸಂಬಂಧಪಟ್ಟ ಇಲಾಖೆಗೆ ಪಾವತಿಸುವಂತೆ ತಿಳಿಸಿ ಈ ಬಗ್ಗೆ ಪ್ರತಿ ತಿಂಗಳು ತಪಾಸಣೆ ನಡೆಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚಿಸಿದರು.ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರಗಳಾದ ಗಮ್ ಬೂಟ್, ಸ್ಯಾನಿಟೈಸರ್, ಗ್ಲೌಸ್, ಮಾಸ್ಕ್, ಸಮವಸ್ತ್ರ, ರೇನ್‌ಕೋಟ್‌ಗಳನ್ನು ಕಡ್ಡಾಯವಾಗಿ ನೀಡುವಂತೆ ಮತ್ತು ಈ ಉಪಕರಣಗಳನ್ನು ಪೌರಕಾರ್ಮಿಕರು ಕಡ್ಡಾಯವಾಗಿ ಬಳಸುವ ಕುರಿತಂತೆ ಅಧಿಕಾರಿಗಳು ಪರಿಶೀಲಿಸಬೇಕು.ಪೌರಕಾರ್ಮಿಕರಿಗೆ ಮೂರು ತಿಂಗಳಿಗೊಮ್ಮ ಆರೋಗ್ಯ ತಪಾಸಣೆ ಮತ್ತು ವರ್ಷಕ್ಕೊಮ್ಮೆ ಅವರ ಆರೋಗ್ಯದ ಕುರಿತು ಮಾಸ್ಟರ್ ಚೆಕಪ್‌ನ್ನು ಕಡ್ಡಾಯವಾಗಿ ಮಾಡಿಸಬೇಕು ಹಾಗೂ ಪ್ರತಿದಿನ ಉಪಾಹಾರ ನೀಡುವಂತೆ ಮತ್ತು ಉಪಹಾರದಲ್ಲಿ ಪೌಷ್ಟಿಕಾಂಶಗಳು ಇರುವ ಬಗ್ಗೆ ಪರಿಶೀಲಿಸಬೇಕು ಮತ್ತು ವಿಶ್ರಾಂತಿಗೃಹ ನಿರ್ಮಾಣ ಮಾಡಿ ಅದರಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಖಾಸಗಿ ತೆರೆದ ಬಾವಿ ಅಥವಾ ಕೊಳವೆ ಬಾವಿಗಳು ಇರುವ ಕುರಿತಂತೆ ಪರಿಶೀಲನೆ ನಡೆಸಿ ಅವುಗಳನ್ನು ತಕ್ಷಣ ಮುಚ್ಚುವ ಕುರಿತು ಕ್ರಮ ಕೈಗೊಳ್ಳಬೇಕು ಮತ್ತು ತೆರೆದ ಬಾವಿ ಅಥವಾ ಕೊಳವೆ ಬಾವಿಗಳನ್ನು ಮುಚ್ಚಿರುವ ಕುರಿತಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆಯುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ತಿಳಿಸಿದರು.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ ವೈ.ಕೆ., ಪೌರಾಯುಕ್ತ ಜಗದೀಶ ಹುಲಗಜ್ಜಿ ಮೊದಲಾದವರು ಇದ್ದರು.