ಮನೆ ನಿರ್ಮಾಣಕ್ಕೆ ಜಾಗದ ಅವಶ್ಯಕತೆಯಿದ್ದಲ್ಲಿ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್‌ಗಳನ್ನು ಸಂಪರ್ಕಿಸುವಂತೆ ಮತ್ತು ಕಂದಾಯ ಭೂಮಿ ಲಭ್ಯವಿಲ್ಲವಾದಲ್ಲಿ ಪರ್ಯಾಯ ನಿವೇಶನಗಳನ್ನು ಗುರುತಿಸುವಂತೆ ತಿಳಿಸಿದರು.

ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತ ಸಭೆ

ಕನ್ನಡಪ್ರಭ ವಾರ್ತೆ ಕಾರವಾರ ಜಿಲ್ಲೆಯಲ್ಲಿನ ಎಲ್ಲ ನಗರಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಶೀಘ್ರದಲ್ಲಿ ಮನೆಗಳನ್ನು ಒದಗಿಸುವಂತೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ ಅವರಿಗೆ ಹಸ್ತಾಂತರಿಸುವಂತೆ ಮತ್ತು ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಮನೆ ನಿರ್ಮಾಣಕ್ಕೆ ಜಾಗದ ಅವಶ್ಯಕತೆಯಿದ್ದಲ್ಲಿ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್‌ಗಳನ್ನು ಸಂಪರ್ಕಿಸುವಂತೆ ಮತ್ತು ಕಂದಾಯ ಭೂಮಿ ಲಭ್ಯವಿಲ್ಲವಾದಲ್ಲಿ ಪರ್ಯಾಯ ನಿವೇಶನಗಳನ್ನು ಗುರುತಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮ್ಯಾನ್‌ಹೋಲ್‌ಗಳನ್ನು ಕಾರ್ಮಿಕರಿಂದ ಸ್ವಚ್ಛಗೊಳಿಸದೇ ಕಡ್ಡಾಯವಾಗಿ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರಗಳನ್ನು ಬಳಸುವಂತೆ ಕಟುನಿಟ್ಟಿನ ಸೂಚನೆ ನೀಡಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಕ್ಕಿಂಗ್ ಯಂತ್ರಗಳನ್ನು ಬಳಸುತ್ತಿರುವ ಕುರಿತಂತೆ ಪರಿಶೀಲಿಸುವಂತೆ ಸೂಚಿಸಿದರು.

ಪೌರಕಾರ್ಮಿಕರಿಗೆ ಪ್ರತಿ ತಿಂಗಳು ನಿಗದಿತ ದಿನಾಂಕದಂದು ವೇತನ ಪಾವತಿಯಾಗಬೇಕು, ಇಎಸ್‌ಐ ಮತ್ತು ಇಪಿಎಫ್ ನಿಗದಿತವಾಗಿ ಕಡಿತವಾಗುತ್ತಿರುವ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಕರ್ತವ್ಯ ಸಮಯದಲ್ಲಿ ಸುರಕ್ಷಾ ಪರಿಕರಗಳನ್ನು ತಪ್ಪದೇ ಬಳಸುವ ಕುರಿತಂತೆ ಪೌರ ಕಾರ್ಮಿಕರಿಗೆ ನಿರ್ದೇಶನ ನೀಡಬೇಕು, ನಿಗದಿತ ಸಮಯದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಮಾಸ್ಟರ್ ಹೆಲ್ತ್ ಚೆಕಪ್‌ಗಳನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದರು.

ಪ್ರತಿದಿನ ಪೌರ ಕಾರ್ಮಿಕರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕಾಂಶವುಳ್ಳ ಉಪಾಹಾರ ಒದಗಿಸಬೇಕು ಮತ್ತು ಅವರಿಗೆ ವಿಶ್ರಾಂತಿ ಗೃಹಗಳ ವ್ಯವಸ್ಥೆ ಮಾಡಬೇಕು ಹಾಗೂ ಸಂಕಷ್ಟ ಭತ್ಯೆಗಳನ್ನು ವಿತರಿಸಬೇಕು ಎಂದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ವೈ.ಕೆ. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.