ಕೆಐಡಿಬಿಗೆ ಭೂಸ್ವಾಧೀನ ಜಮೀನಿಗೆ ಶೀಘ್ರ ಪರಿಹಾರ ನೀಡಿ

| Published : Apr 20 2025, 01:54 AM IST

ಸಾರಾಂಶ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೂ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ಹಾಗೂ ಇನ್ನು ಮುಂದೆ ರೈತರ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳದಂತೆ ಶಾಸಕ ಶ್ರೀನಿವಾಸ್ ಅವರು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೂ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ಹಾಗೂ ಇನ್ನು ಮುಂದೆ ರೈತರ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳದಂತೆ ಶಾಸಕ ಶ್ರೀನಿವಾಸ್ ಅವರು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿ, ತ್ಯಾಮಗೊಂಡ್ಲು, ಕಸಬಾ ಹೋಬಳಿಗಳಲ್ಲಿ ರೈತರ ಜಮೀನು ಭೂಸ್ವಾಧೀನ ಪಡಿಸಿಕೊಂಡು ಈಗಾಗಲೇ ಕೈಗಾರಿಕೆಗಳು ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿವೆ. ವ್ಯವಸಾಯ ಮಾಡಲು ರೈತರಿಗೆ ಜಮೀನು ಇಲ್ಲದಂತಾಗಿದೆ. ಮುಂದೆ ಭೂಸ್ವಾಧೀನ ಮಾಡಿಕೊಳ್ಳದಂತೆ ಮನವಿ ಮಾಡಿದ್ದೇನೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.

ಪರಿಹಾರ ಪಾವತಿ:

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸುವ ಉದ್ದೇಶದಿಂದ ಭೂಸ್ವಾಧೀನ ಪಡಿಸಿದಾಗ ರೈತರನ್ನು ಜಮೀನುಗಳಿಂದ ಒಕ್ಕಲೆಬ್ಬಿಸಿ ಅನ್ಯಾಯ ಮಾಡಲು ಬಿಡುವುದಿಲ್ಲ. ಭೂ ಮಂಜೂರಾತಿ ಪಡೆದು ಅನುಭವದಲ್ಲಿರುವ ರೈತರಿಗೆ ಪರಿಹಾರ ಪಾವತಿಯಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದರು.

ಮಾಹಿತಿ ನೀಡಿ:

ಕೈಗಾರಿಕಾ ಉದ್ದೇಶಕ್ಕಾಗಿ ಅಧಿಸೂಚಿಸುವ ಪೂರ್ವದಲ್ಲಿಯೇ ರೈತರು ಅರ್ಜಿ ಸಲ್ಲಿಸಿದ್ದು, ಆ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದರೆ, ಅಂತಹ ರೈತರು ಮಂಡಳಿಗೆ ಮಾಹಿತಿ ನೀಡಿದರೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದು ನಿಯಮಾನುಸಾರ ಜಮೀನಿನಲ್ಲಿ ಅನುಭವದಲ್ಲಿರುವ ಹಾಗೂ ಅಧಿಸೂಚನೆಗಿಂತ ಪೂರ್ವದಲ್ಲಿ ಅರ್ಜಿ ಸಲ್ಲಿಸಿರುವ ನಮೂನೆ- 53, 57ರ ಅರ್ಜಿದಾರರನ್ನು, ಸಂಬಂಧಪಟ್ಟ ಕಂದಾಯ ಇಲಾಖೆ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳನ್ನು, ತಹಸೀಲ್ದಾರರನ್ನು ಪ್ರತಿವಾದಿಯಾಗಿಸಿ ಸಾಮಾನ್ಯ ತೀರ್ಪನ್ನು ರಚಿಸಲಾಗುವುದು. ಈ ತೀರ್ಪಿನ ಮೊತ್ತವನ್ನು ನ್ಯಾಯಾಲಯಗಳಲ್ಲಿ ಠೇವಣಿ ಇಡಲಾಗುವುದು ಎಂದು ತಿಳಿಸಿದ್ದಾರೆ ಎಂದು ವಿವರಿಸಿದರು.

ಅಧಿಕಾರಿಗಳಿಂದ ಮಾಹಿತಿ:

ಒಂದು ವೇಳೆ ಭೂ ಸಕ್ರಮೀಕರಣ ಸಮಿತಿಯು ಭೂ ಮಂಜೂರಾತಿ ಮಾಡಿ ಸಾಗುವಳಿ ಚೀಟಿ ಮತ್ತು ಇತರೆ ದಾಖಲೆಗಳನ್ನು ನೀಡಿದಲ್ಲಿ ಮಂಜೂರಾತಿಗಳ ನೈಜತೆಯನ್ನು ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಪಡೆದು ಭೂಮಾಲೀಕರಿಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಭೂಮಿ ಕಳೆದುಕೊಂಡವರಿಗೆ ಕೆಲಸ ಕೊಡಿ:

ಕೆಐಡಿಬಿಗೆ ತಮ್ಮ ಜಮೀನುಗಳನ್ನು ನೀಡಿ, ಕಡಿಮೆ ಪರಿಹಾರ ಪಡೆದುಕೊಂಡ ಕುಟುಂಬದಲ್ಲಿನ ಯಾರಾದಾರೂ ಒಬ್ಬರಿಗೆ ಅವರ ವಿದ್ಯಾಭ್ಯಾಸದ ಅರ್ಹತೆಗೆ ತಕ್ಕಂತೆ ಕೈಗಾರಿಕೆಗಳನ್ನು ಉದ್ಯೋಗ ನೀಡುವಂತೆ ಕ್ಷೇತ್ರಕ್ಕೆ ಹೋದಾಗ ರೈತರು, ಯುವಕರು ಮನವಿ ಮಾಡುತ್ತಿದ್ದು, ಈ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

ಪೋಟೋ 4 :

ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ಮನವಿ ಮಾಡಿದರು.