ಸಾರಾಂಶ
ರೈಲ್ವೆಗೆ ಹೆಚ್ಚಿನ ಆದಾಯ ಆಕರ್ಷಿಸಿ, ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯ ಒದಗಿಸುವ ಜೊತೆಗೆ ಬಾಕಿ ಉಳಿದಿರುವ ಕಾರ್ಯ ಶೀಘ್ರ ಪೂರ್ಣಗೊಳಿಸುವಂತೆ ಸಲಹೆ
ಹುಬ್ಬಳ್ಳಿ:ನೈರುತ್ಯ ರೇಲ್ವೆ ಇಲಾಖೆಯು ಅತ್ಯಾಧುನಿಕ ರಕ್ಷಣಾ ಉಪಕರಣಗಳನ್ನು ಅಳವಡಿಸಿ ಶೀಘ್ರ ಹಾಗೂ ಸುರಕ್ಷಿತ ಕಾರ್ಯ ನಿರ್ವಹಣೆಯತ್ತ
ಮುಂದಡಿ ಇಡುತ್ತಿದೆ ಎಂದು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಹೇಳಿದರು.ನೈರುತ್ಯ ರೈಲ್ವೆ ವತಿಯಿಂದ ವಿಭಾಗೀಯ ಕಚೇರಿಯಲ್ಲಿ ಶನಿವಾರ ನವೀಕರಿಸಲಾದ ಆರ್‌ಪಿಎಫ್ ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರ (ಡಿಜಿಟಲ್ ಸಿಸಿ ಕ್ಯಾಮೆರಾ ಕಣ್ಗಾವಲು ಪ್ಯಾನಲ್) ಉದ್ಘಾಟನೆ ಸಮಾರಂಭ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ರೈಲ್ವೆಗೆ ಹೆಚ್ಚಿನ ಆದಾಯ ಆಕರ್ಷಿಸಿ, ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯ ಒದಗಿಸುವ ಜೊತೆಗೆ ಬಾಕಿ ಉಳಿದಿರುವ ಕಾರ್ಯ ಶೀಘ್ರ ಪೂರ್ಣಗೊಳಿಸುವಂತೆ ಸಲಹೆ ನೀಡಿದ ಅವರು, ಡಿಆರ್‌ಎಂ ಬೇಲಾ ಮೀನಾ, ಹೆಚ್ಚುವರಿ ಡಿಆರ್‌ಎಂಗಳ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ವಿಭಾಗ ಸಾಧಿಸಿರುವ ಸುಧಾರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಮಾತನಾಡಿ, ಇಲಾಖೆಯ ದಕ್ಷ ಕಾರ್ಯ ನಿರ್ವಹಣೆಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವದಾಗಿದ್ದು, ಇದೇ ರೀತಿ ಕಾರ್ಯನಿರ್ವಹಿಸುವಂತೆ ಕೋರಿದರು.
ಸಭೆಯಲ್ಲಿ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಪ್ರಗತಿ ಮಂಡಿಸಿದರು. ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಟಿ.ಬಿ. ಭೂಷಣ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.79 ನಿಲ್ದಾಣಗಳ ಮೇಲೆ ಕಣ್ಗಾವಲು
ವಿಭಾಗೀಯ ಆರ್‌ಪಿಎಫ್ ಸೆಕ್ಯೂರಿಟಿ ಕಂಟ್ರೋಲ್ ರೂಮ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕಮಾಂಡ್ ಕಂಟ್ರೋಲ್ ಒಂದು ಆತ್ಯಾಧುನಿಕ ವ್ಯವಸ್ಥೆಯಾಗಿದ್ದು ವಿಭಾಗೀಯ ರೈಲ್ವೆ ವ್ಯಾಪ್ತಿಯಲ್ಲಿನ 79 ರೈಲು ನಿಲ್ದಾಣಗಳು ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ಕಣ್ಣಿಡಲಿದೆ. ಎಐ ತಂತ್ರಜ್ಞಾನ ಒಳಗೊಂಡ 943 ಸಿಸಿ ಕ್ಯಾಮೆರಾಗಳಿಂದ ದೃಶ್ಯ ಸೆರೆಹಿಡಿಯಲಾಗುತ್ತದೆ. ಈ ಪ್ಯಾನಲ್ ಅನ್ನು ರೇಲ್ ಟೆಲ್ ಕಾರ್ಪೋರೇಶನ್ ಇಂಡಿಯಾ ಲಿಮಿಟೆಡ್ ಸಂಯೋಜನೆಯಲ್ಲಿ ಅಳವಡಿಸಲಾಗಿದೆ.