ಹಾನಗಲ್ಲ: ಜನಗಣತಿ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೇ ತಮ್ಮ ಮನೆಯ ಮಾಹಿತಿ ನೀಡುವಂತಾಗಲಿ, ಗಣತಿದಾರರು ಕೂಡ ಸಾರ್ವಜನಿಕರಿಂದ ಮುಕ್ತ ಹಾಗೂ ಲೋಪವಿಲ್ಲದ ಮಾಹಿತಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮನವಿ ಮಾಡಿದರು.

ಹಾನಗಲ್ಲಿನ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ಎನ್‌ಸಿಜೆಸಿ ಕಾಲೇಜಿನಲ್ಲಿ ತಾಲೂಕು ಆಡಳಿತ ಆಯೋಜಿಸಿದ ಗಣತಿದಾರರ ತರಬೇತಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇದು ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ಅತ್ಯಂತ ಮಹತ್ವದ ಸರ್ಕಾರದ ಕಾರ್ಯ. ಎಲ್ಲ ನೌಕರರು ಅದರಲ್ಲೂ ಶಾಲೆಗಳ ಶಿಕ್ಷಕರು ಅತ್ಯಂತ ಕಾಳಜಿಯಿಯಿಂದ ಈ ಕೆಲಸವನ್ನು ನಿರ್ವಹಿಸಬೇಕು. ಇದು ಅತ್ಯಂತ ಅಗತ್ಯ ಮಾಹಿತಿ. ಇದು ಸರ್ಕಾರದ ವಿವಿಧ ಯೋಜನೆಗಳಿಗಾಗಿ ಒಟ್ಟು ಜನಸಂಖ್ಯೆಯನ್ನು ಕಲೆ ಹಾಕುವುದು ಹಾಗೂ ಸಮುದಾಯಗಳಿಗೆ ಸೌಲಭ್ಯಗಳನ್ನು ನೀಡುವಲ್ಲಿ ಇದು ಹೆಚ್ಚು ಸಹಕಾರಿ. ಎಲ್ಲಿಯೂ ಲೋಪಕ್ಕೆ ಅವಕಾಶ ಇಲ್ಲದಂತೆ ಗಣತಿದಾರರು ಮಾಹಿತಿ ಕಲೆಹಾಕಬೇಕು. ಗಣತಿಗಾಗಿ ಯಾವುದೇ ಮಾಹಿತಿ ಕೊರತೆ ಬಂದಲ್ಲಿ ತಕ್ಷಣ ತಾಲೂಕು ಆಡಳಿತವನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ನಂತರ ಮಾಹಿತಿ ನೀಡಿದ ತಾಲೂಕು ತಹಸೀಲ್ದಾರ್ ಎಸ್.ರೇಣುಕಾ, ಹಾನಗಲ್ಲ ತಾಲೂಕಿನ ೧೬೪ ಗ್ರಾಮಗಳು ಹಾಗೂ ಹಾನಗಲ್ಲ ಪುರಸಭೆಯನ್ನೊಳಗೊಂಡು ೭೦ ಸಾವಿರ ಕುಟುಂಬಗಳು ಇಲ್ಲಿವೆ. ೫೭೫ ಶಿಕ್ಷಕರು ಗಣತಿದಾರರಾಗಿ ಹಾಗೂ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಣತಿಗಾಗಿ ಒಟ್ಟು ೪೬೯ ಭಾಗಗಳನ್ನು ಮಾಡಲಾಗಿದೆ. ಪ್ರತಿ ಮನೆ ೩೩ ಸಂಗತಿಗಳನ್ನು ಗಣತಿಯಲ್ಲಿ ದಾಖಲಿಸಬೇಕಾಗುತ್ತದೆ. ಮನೆ ಸಂಖ್ಯೆ, ನೆಲಕ್ಕೆ ಬಳಸಿದ ಸಾಮಗ್ರಿ, ಗೋಡೆಗೆ ಬಳಸಲಾದ ಸಾಮಗ್ರಿ, ವಾಸಿಸುತ್ತಿರುವ ವ್ಯಕ್ತಿಗಳ ಸಂಖ್ಯೆ, ಮನೆಯ ಕೊಠಡಿಗಳ ಸಂಖ್ಯೆ, ನೀರಿನ ಮೂಲ, ಬೆಳಕಿನ ಸ್ಥಿತಿ, ಶೌಚಾಲಯ ಸ್ನಾನಗೃಹ, ಅಡಿಗೆ ಮನೆ ಸೇರಿದಂತೆ ವಿವಿಧ ಮಾಹಿತಿ ಈ ಸಂದರ್ಭದಲ್ಲಿ ಕಲೆಹಾಕಬೇಕಾಗುತ್ತದೆ. ಈ ಮಾಹಿತಿ ನೀಡುವುದರಿಂದ ಯಾವುದೇ ಸೌಲಭ್ಯವನ್ನು ಕಡಿತಗೊಳಿಸುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿಕ್ಷಕ ನಿಂಗಪ್ಪ ಸಾಳುಂಕೆ ಅವರು ರಚಿಸಿ ಹಾಡಿದ ಜನಗಣತಿ ಗೀತೆಯನ್ನು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಬಿಡುಗಡೆಗೊಳಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ, ಗ್ರೇಡ್-೨ ತಹಸೀಲ್ದಾರ್ ವೆಂಕಟೇಶ ಚೌಗುಲಾ, ನಿಂಗಪ್ಪ ಸಾಳುಂಕೆ, ಮಹೇಶ ನಾಯ್ಕ, ಬಿ.ಎನ್. ಸಂಗೂರ, ವಿ.ಟಿ. ಪಾಟೀಲಈ ಸಂದರ್ಭದಲ್ಲಿದ್ದರು.