ಕೃಷಿ ತಂತ್ರಜ್ಞಾನಗಳ ಮಾಹಿತಿ ರೈತರಿಗೆ ತಲುಪಿಸಿ

| Published : Jan 20 2024, 02:01 AM IST

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಸಹಯೋಗದಲ್ಲಿ 15ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ನಡೆಯಿತು.

ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಸಹಯೋಗದಲ್ಲಿ 15ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ನಡೆಯಿತು.

ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ.ಸುರೇಶ್‌ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ಧ್ಯೇಯೋದ್ದೇಶ, ಚಟುವಟಿಕೆಗಳು ಮತ್ತು ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಉದ್ದೇಶವನ್ನು ಸಭೆಗೆ ತಿಳಿಸುತ್ತಾ, ಸಮಗ್ರ ಕೃಷಿ ಪದ್ಧತಿ, ಕಾಲಕ್ಕನುಗುಣವಾಗಿ ಕೃಷಿಯಲ್ಲಿ ನೂತನ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ತಲುಪಿಸಲು ಕೃಷಿ ವಿಜ್ಞಾನ ಕೇಂದ್ರದ ಪಾತ್ರ ಮಹತ್ವದ್ದಾಗಿದೆ ಎಂದು ವಿವರಿಸಿದರು.

ಕೇಂದ್ರದ ಮುಖ್ಯಸ್ಥ ಡಾ. ಹನುಮಂತರಾಯ ಮಾತನಾಡಿ, 14ನೇ ವೈಜ್ಞಾನಿಕ ಸಲಹಾ ಸಮಿತಿಯ ನಿರ್ಣಯಗಳ ಬಗ್ಗೆ ಕೈಗೊಂಡ ಕ್ರಮಗಳು, ಕೇಂದ್ರದ ಸಮಗ್ರ ಪ್ರಗತಿ, 2023-24 ನೇ ಸಾಲಿನಲ್ಲಿ ಹಮ್ಮಿಕೊಂಡಿರುವ ಕಾರ್ಯ ಚಟುವಟಿಕೆಗಳು, ಸುತ್ತು ನಿಧಿ ಚಟುವಟಿಕೆಗಳು, 2024-25 ನೇ ಸಾಲಿನ ಪ್ರಸ್ತಾವಿತ ಕ್ರಿಯಾ ಯೋಜನೆಯನ್ನು ಮಂಡಿಸಿದರು.

ಈ ಸಂದರ್ಭದಲ್ಲಿ 2024-25ನೇ ಸಾಲಿನ ತಾಂತ್ರಿಕ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಸಲಹಾ ಸಮಿತಿಯ ಸದಸ್ಯರಿಂದ ಹಾಗೂ ಪ್ರಗತಿಪರ ರೈತರಿಂದ ಚರ್ಚೆ ಮತ್ತು ಸಲಹೆಗಳನ್ನು ಪಡೆಯಲಾಯಿತು. ಗಣ್ಯರಿಂದ ರಾಗಿಯಲ್ಲಿ ಯಾಂತ್ರೀಕರಣ, ಕೃಷಿಯಲ್ಲಿ ಡ್ರೋನ್ ಬಳಕೆ, ಜೈವಿಕ ಗೊಬ್ಬರಗಳು, ಸಾವಯವ ಕೃಷಿಯಲ್ಲಿ ದ್ರವ ರೂಪಿ ಗೊಬ್ಬರಗಳು, ಬೆಳೆಗಳ ನೈಸರ್ಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಸ್ಯ ಬೆಳವಣಿಗೆ ಉತ್ತೇಜಕಗಳು, ಟೊಮ್ಯಾಟೊ ಬೆಳೆಯಲ್ಲಿ ಬರುವ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ, ನೈಸರ್ಗಿಕ ಕೃಷಿಯ ನಾಲ್ಕು ಚಕ್ರಗಳು ಮತ್ತು ಅಹಾರ ಭದ್ರತೆಗಾಗಿ ಪೌಷ್ಟಿಕ ಕೈತೋಟ ಕುರಿತು ಹಸ್ತಪ್ರತಿಗಳನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ವಿ.ಎಲ್. ಮಧುಪ್ರಸಾದ್, ನೋಡಲ್ ಅಧಿಕಾರಿ ಡಾ. ಎಂ.ಜೆ.ಚಂದ್ರೇಗೌಡ, ಇತರೆ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯರು ಮತ್ತು ಪ್ರಗತಿಪರ ರೈತರು,ರೈತ ಮಹಿಳೆಯರು ಭಾಗವಹಿಸಿ, ದಾಳಿಂಬೆ ಬೆಳೆಯ ನಿರ್ವಹಣೆಗೆ ಸಂಬಂದಿಸಿದಂತೆ, ಹೆಚ್ಚು ಮೌಲ್ಯದ ತರಕಾರಿಗಳಾದ ಬ್ರಕೋಲಿ, ಲೆಟ್ಯೂಸ್ ಬೆಳೆಗಳ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆಗಳನ್ನು ನೀಡಿದರು. ಕೇಂದ್ರದಿಂದ ಹಮ್ಮಿಕೊಳ್ಳಲಾಗಿರುವ ಪ್ರಮುಖ ಪ್ರಾತ್ಯಕ್ಷಿಕೆಗಳಾದ ತೊಗರಿ ತಳಿ ಬಿಆರ್‌ಜಿ-೩, ಗುಲಾಬಿಯಲ್ಲಿ ಥ್ರಿಪ್ಸ್ ನಿರ್ವಹಣೆ, ಮೇವಿನ ಬೆಳೆ ಸಿಒಎಫ್ಎಸ್.-31 ರ ಪರಿಣಾಮದ ಅಧ್ಯಯನವನ್ನು ಮಾಡಬೇಕೆಂದು ಸೂಚಿಸಿದರು.19ಕೆಡಿಬಿಪಿ1-

ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 15ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆ ನಡೆಯಿತು.