ದಾಬಸ್‍ಪೇಟೆ: ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಅಧಿಕಾರಿಗಳಿಗೆ ಸಹಕರಿಸಿದಾಗ ಮಾತ್ರ ಅಕ್ರಮ ಮತದಾರರನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ತಿಳಿಸಿದರು.
ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದೆ. ರಾಜಕೀಯ ಪಕ್ಷಗಳ ಸಭೆಗಳು, ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಗಳು ಈಗಾಗಲೇ ನಡೆಯುತ್ತಿವೆ. ವಿಧಾನಸಭಾ ಕ್ಷೇತ್ರದ 278 ಮತಗಟ್ಟೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‍ಒ)ನೇಮಿಸಲಾಗಿದ್ದು, ಅವರ ಕಾರ್ಯದ ಮೇಲ್ವಿಚಾರಣೆಗಾಗಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ವಿಧಾನಸಭಾ ಕ್ಷೇತ್ರದ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ-2026 (ಎಸ್‍ಐಆರ್)ರ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಬಿಎಲ್‍ಗಳು ಹಾಗೂ ಮೇಲ್ವಿಚಾರಕರು ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರಿಗೂ ವಿಶೇಷ ತರಬೇತಿ ನೀಡಲಾಗುವುದು. ಜೂ.30ರಿಂದ ಜು.29ರವರೆಗೆ ಬಿಎಲ್‍ಒಗಳು ಪ್ರತಿ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಅರ್ಜಿಗಳನ್ನು ವಿತರಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ಮೂರು ಬಾರಿ ಭೇಟಿ ನೀಡಿ ಮಾಹಿತಿ ಪಡೆಯಲಾ ಗುವುದು. ಸಂಪರ್ಕ ಸಾಧ್ಯವಾಗದಿದ್ದಲ್ಲಿ ನೋಟಿಸ್ ಅಂಟಿಸಿ ಮಾಹಿತಿ ನೀಡಲಾಗುವುದು. ಈಗಾಗಲೇ ಬಿಎಲ್‍ಒಗಳಿಗೆ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಮ್ಯಾಪಿಂಗ್ ಬಾಕಿ:ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,26,384 ಮತದಾರ ರಿದ್ದು, ಅವರಲ್ಲಿ 1,92,298 ಮತದಾರರ ಮ್ಯಾಪಿಂಗ್ ಮಾಡಿಡಲಾಗಿದೆ. 34,086 ಮತಗಳ ಮ್ಯಾಪಿಂಗ್ ಬಾಕಿ ಇದೆ. ಕ್ಷೇತ್ರದ ಬೂತ್ ನಂಬರ್ 166, 169, 170, 171ಗಳಲ್ಲಿ ಶೇ.32ರಷ್ಟು ಮ್ಯಾಪಿಂಗ್ ಆಗಿದ್ದು, ಬೂತ್ ನಂಬರ್ 194ರಲ್ಲಿ ಶೇ.32, 200ರಲ್ಲಿ ಶೇ.33, 173ರಲ್ಲಿ ಶೇ.44 ಮಾತ್ರ ಮ್ಯಾಪಿಂಗ್ ಮಾಡ ಲಾಗಿದೆ. ಸಾಕಷ್ಟು ಮ್ಯಾಪಿಂಗ್ ಬಾಕಿಯಿದೆ. ತಾಲೂಕಿನ 27 ಗ್ರಾಮ ಪಂಚಾಯಿತಿ ಮಟ್ಟದ ಸೇವಾಕೇಂದ್ರ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿ ತಾಲೂಕು ಕಚೇರಿ ಒಳಗೊಂಡಂತೆ 4 ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದರು.
ಆ.5ರಿಂದ ಸೆ.4ರವರೆಗೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅರ್ಜಿಗಳ ವಿಚಾರಣೆಯನ್ನು ಅ.3ರೊಳಗೆ ಪೂರ್ಣಗೊಳಿಸಿ ಅ.7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಆದ್ದರಿಂದ ಕ್ಷೇತ್ರದ ಮತದಾರರು ತಮ್ಮ ಮನೆಗಳಿಗೆ ಬರುವಂತಹ ಬಿಎಲ್ ಒಗಳಿಗೆ ಸರಿಯಾದ ಮಾಹಿತಿ ನೀಡಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೋಟ್............
ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ಶೇ.85.01ರಷ್ಟು ಪೂರ್ಣಗೊಂಡಿದೆ. ಸರ್ಕಾರ ಕಟ್ಟಡಗಳಿಲ್ಲದ ಪ್ರದೇಶದ ಶಾಲೆಗಳಲ್ಲಿ ಮತದಾರರ ಸಹಾಯಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಮತಗಟ್ಟೆಯಲ್ಲಿ 1,200ಕ್ಕೂ ಹೆಚ್ಚು ಮತದಾರರಿದ್ದಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಪರಿಶೀಲನೆ ನಡೆಯುತ್ತಿದೆ. ಆ.5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು.-ಮಲ್ಲೇಶ್ ಬೀರಪ್ಪ ಪೂಜಾರ್, ತಹಸೀಲ್ದಾರ್
ಪೋಟೋ 8 :ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್