ಪುನರ್ವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ: ಆರ್.ಬಿ. ತಿಮ್ಮಾಪುರ

| Published : Jul 03 2024, 12:16 AM IST

ಪುನರ್ವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ: ಆರ್.ಬಿ. ತಿಮ್ಮಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದಂತೆ ಪುನರ್ ವಸತಿ, ಪುನರ್ ನಿರ್ಮಾಣ ಹಾಗೂ ಭೂ ಸ್ವಾಧೀನ ವಿಷಯಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜನವಸತಿ ಇರುವಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತಿ ನೂತನ ಸಭಾಂಗಣದಲ್ಲಿ ಸೋಮವಾರ ಜರುಗಿದ ಕೃಷ್ಣಾ ಮೇಲ್ದಂಡೆ ಯೋಜನೆಯ ಜಿಲ್ಲೆಗೆ ಸಂಬಂಧಿಸಿದ ಪುನರ್ವಸತಿ, ಪುನರ್ ನಿರ್ಮಾಣ ಹಾಗೂ ಭೂಸ್ವಾಧೀನ ವಿಷಯಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುನರ್ವಸತಿ ಕೇಂದ್ರಗಳಲ್ಲಿ ಎಲ್ಲಿ ಜನರು ಬಂದು ವಾಸಿಸುತ್ತಿದ್ದಾರೆ, ಅಲ್ಲಿ ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಸ್ಮಶಾನದಂತಹ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದರು.

ಪುನರ್ವಸತಿಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಇದರಿಂದ ಜನಪ್ರತಿನಿಧಿಗಳನ್ನು ಸಾರ್ವಜನಿಕರು ಕೇಳಿದಾಗ ಈ ರೀತಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಅನಾವಶ್ಯಕವಾಗಿ ಹಣ ವ್ಯಯವಾಗುವುದನ್ನು ತಡೆಗಟ್ಟಬೇಕು. ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಇಲ್ಲಿನ ಕಚೇರಿಗಳಿಗೆ ಅಧಿಕಾರಿಗಳು ಬಂದು ಹಾಜರಾಗುವರೆಗೂ ಇಲ್ಲಿರುವ ಅಧಿಕಾರಿಯನ್ನು ಬಿಡುಗಡೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಜೆ.ಟಿ. ಪಾಟೀಲ ಮಾತನಾಡಿ. ಭೂಸ್ವಾಧೀನ ವಿಷಯದಲ್ಲಿ ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ಅಧಿಕಾರ ನಡೆಸುತ್ತಿದ್ದೀರಿ, ಕೆಲವೊಂದು ಕಡೆ ಮನಸೋ ಇಚ್ಛೆ ಆರ್ ಸಿ ಕೊಟ್ಟಿದ್ದೀರಿ, ಇದಕ್ಕೆ ಯಾರು ಹೊಣೆಗಾರರು ? ಭೂಸ್ವಾಧೀನದಲ್ಲಿ ಸಂತ್ರಸ್ತರಿಗೆ ಯಾವ ರೀತಿಯ ಪರಿಹಾರ ನೀಡಬೇಕು, ಕಾನೂನು ಏನು ಹೇಳುತ್ತದೆ ಎಂಬುದನ್ನು ಅಧ್ಯಯನ ಮಾಡಿ, ಸಮಸ್ಯೆ ಇದ್ದಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ತಂದು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಎಚ್.ವೈ. ಮೇಟಿ, ಎಂಎಲ್ಸಿಗಳಾದ ಹಣಮಂತ ನಿರಾಣಿ, ಪಿ.ಎಚ್. ಪೂಜಾರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಕೃಷ್ಣಾ ಮೇಲ್ದಂಡೆ ಯೋಜನೆ ಪ್ರಾಧಿಕಾರದ ಮಹಾ ವ್ಯವಸ್ಥಾಪಕ ರಮೇಶ ಕಳಸದ ಸೇರಿದಂತೆ ಇತರರು ಇದ್ದರು.

10 ರಿಂದ 15 ವರ್ಷಗಳ ನಂತರದಲ್ಲಿ ಜನರು ಬಂದು ವಾಸಿಸುವ ಪುನರ್ವಸತಿ ಕೇಂದ್ರಗಳಲ್ಲಿ ಗ್ರಂಥಾಲಯ ನಿರ್ಮಿಸಿರುವುದು, ಮನೆಗಳು ಇಲ್ಲದೆ ಇರುವಲ್ಲಿ ಶೌಚಾಲಯ ನಿರ್ಮಿಸಿರುವುದು ನೋಡಿದರೆ ಇದರಲ್ಲಿ ಬೇರೆ ಉದ್ದೇಶ ಇರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಎಂದೂ ಪ್ರವಾಹ ಬರದೇ ಇರುವಂತಹ ಸ್ಥಳದಲ್ಲಿ ಕಟ್ಟಡ ನಿರ್ಮಿಸಿದ್ದೀರಿ, 17 ರಿಂದ 31 ಕಾಮಗಾರಿ ಕೈಗೊಂಡಿದ್ದು, ಮೊದಲ 17 ಕಾಮಗಾರಿಗಳಿಗೆ ₹ 28 ಕೋಟಿ, 31 ಕಾಮಗಾರಿಗೆ ₹ 52 ಕೋಟಿ ಖರ್ಚು ಮಾಡಿ ಹಾಳು ಮಾಡಲಾಗಿದೆ.

-ಆರ್‌.ಬಿ. ತಿಮ್ಮಾಪುರ ಜಿಲ್ಲಾ ಉಸ್ತುವಾರಿ ಸಚಿವ