ಸಾರಾಂಶ
ಭಾಗ್ಯನಗರದ ಎಲ್ಲ ವಾರ್ಡಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕೊಪ್ಪಳ: ಕಳೆದ 25 ವರ್ಷಗಳಿಂದ ನಾಡಿನ ಜಲ್ವಂತ ಸಮಸ್ಯೆಯಾದ ಕನ್ನಡ ನಾಡು-ನುಡಿ, ನೆಲ-ಜಲ, ಗಡಿಗೆ ಧಕ್ಕೆ ಉಂಟಾದಾಗ ಕರ್ನಾಟಕ ರಕ್ಷಣಾ ವೇದಿಕೆ ಬೀದಿಗಿಳಿದು ಪ್ರತಿಭಟಿಸುತ್ತಾ ಬಂದಿದ್ದು, ಭಾಗ್ಯನಗರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕರವೇ ಪಣತೊಟ್ಟಿದೆ ಎಂದು ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂದರ ಹೇಳಿದರು.
ಭಾಗ್ಯನಗರದ ಎಲ್ಲ ವಾರ್ಡ್‌ಗಳಿಗೆ ಮೂಲಭೂತ ಸೌಕರ್ಯ ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದಿಂದ ಪಟ್ಟಣ ಪಂಚಾಯಿತಿ ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.ಅಭಿವೃದ್ಧಿ ದೃಷ್ಟಿಯಿಂದ ಕೊಪ್ಪಳ-ಭಾಗ್ಯನಗರ ಮುಖ್ಯರಸ್ತೆ ಸಂಪೂರ್ಣ ಹದೆಗೆಟ್ಟಿದ್ದು, ದುರಸ್ತಿಗೊಳಿಸಬೇಕು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ವಾರ್ಡ್‌ಗಳ ನಿವೇಶನಗಳಿಗೆ ಕಟ್ಟಡ ಪರವಾನಗಿ ನೀಡುವುದು, ಶಾಸ್ತ್ರೀ ಕಾಲೋನಿ ಹಾಗೂ ಭಾಗ್ಯನಗರದ ನೀರು ಶೇಖರಣೆಯಾಗುವ ಜಾಗದಲ್ಲಿ ಮೂಲಭೂತ ಸೌಕರ್ಯಗಳಾದ ಉತ್ತಮ ಚರಂಡಿ, ಸಿಸಿ ರಸ್ತೆ ಬೀದಿ ದೀಪಗಳ ನಿರ್ವಹಣೆ, ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ತಪ್ಪಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ತಮ್ಮ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭಾಗ್ಯನಗರ ಘಟಕ ಅಧ್ಯಕ್ಷ ವೀರೇಶ ಮುಂಡಾಸದ, ಉಪಾಧ್ಯಕ್ಷರಾದ ದೇವೇಂದ್ರಪ್ಪ ಅಲಬಗಾನೂರು, ಸಂಘಟನಾ ಕಾರ್ಯದರ್ಶಿ ಪ್ರಕಾಶ ಜೋಷಿ, ಮುಖಂಡರಾದ ಸಂಜೀವಸಿಂಗ್ ಅಜಾರೆ, ಹನುಮಂತ ಜೀರಾಳ, ವೆಂಕಟೇಶ ತಟ್ಟಿ, ನೂರಬಾಷಾ, ರಾಜಾ ಹಚಾಡದ, ದೊಡ್ಡಬಸಪ್ಪ ನರೇಗಲ್ಲ, ರಾಘವೇಂದ್ರ ಕೋಣಿ, ಶೇಖಪ್ಪ, ಮುರಳಿಧರ ಜೋಷಿ, ಅಮೀನಸಾಬ ಸೂಡಿ, ಮಹಿಳಾ ಘಟಕ ಅಧ್ಯಕ್ಷೆ ರಮಾಬಾಯಿ ಪಟವಾರಿ, ಉಪಾಧ್ಯಕ್ಷೆ ನಿರ್ಮಲಾ ಪಾಟೀಲ, ಸರಸ್ವತಿ ಬಸಾಪೂರ, ಭಾಗ್ಯಶ್ರೀ ಹೊಸಮನಿ, ಮಂಜುಳಾ ಅಂಗಡಿ, ಆಶಾಬಾಯಿ ದೇಸಾಯಿ, ತುಂಗಾ ಕಂಪ್ಲೀಕರ, ಹಾಗೂ ಅನೇಕರು ಉಪಸ್ಥಿತರಿದ್ದರು.