ರೈತರಿಗೆ ನೀರಾವರಿ ಯೋಜನೆ ಕೊಡಿ; ಸಿಎಂಗೆ ಬೇಡಿಕೆ ಇಟ್ಟ ಶಾಸಕ ಕೆ.ಎಂ.ಉದಯ್

| Published : Jul 29 2025, 01:01 AM IST

ರೈತರಿಗೆ ನೀರಾವರಿ ಯೋಜನೆ ಕೊಡಿ; ಸಿಎಂಗೆ ಬೇಡಿಕೆ ಇಟ್ಟ ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತಾರು ವರ್ಷಗಳಿಂದ ರೈತರ ಬೇಸಾಯಕ್ಕೆ ವಿದ್ಯುತ್ ಕೊರತೆಯಿಂದಾಗಿ ಅನ್ನದಾತರ ಸಮಸ್ಯೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ಇಂದು ಸೋಮನಹಳ್ಳಿ ಬಳಿ 220 ಕೆ.ವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದ್ದು, ಇನ್ನು ಮುಂದೆ ವಿದ್ಯುತ್ ಸಮಸ್ಯೆಗೆ ಮುಕ್ತಿ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ನಮ್ಮ ತಾಲೂಕಿಗೆ ಮೆಟ್ರೋ, ಏರ್ ರ್ಪೋಟ್ ಬೇಡ ರೈತರಿಗೆ ನೀರಾವರಿ ಯೋಜನೆ ಮಾಡಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.

ಸಾಧನಾ ಸಮಾವೇಶದಲ್ಲಿ ಸಿಎಂ ಮುಂದೆ ಬೇಡಿಕೆ ಇಟ್ಟ ಶಾಸಕರು, ಕ್ಷೇತ್ರದ ಜನತೆ ಆಶೀರ್ವಾದದಿಂದ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಜನತೆ ಋಣ ತೀರಿಸಲು ವಾರದಲ್ಲಿ ನಾಲ್ಕೈದು ದಿನಗಳ ಕಾಲ ಕ್ಷೇತ್ರದಲ್ಲೇ ಇದ್ದುಕೊಂಡು ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇವಲ 2 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ 1146 ಕೋಟಿ ಅನುದಾನ ನೀಡುವ ಮೂಲಕ ಕ್ಷೇತ್ರದ ಜನರ ಋಣ ತೀರಿಸಲು ನನಗೆ ಬೆನ್ನುಲುಬಾಗಿ ನಿಂತಿದ್ದಾರೆ ಎಂದು ಬಣ್ಣಿಸಿದರು.

ಹತ್ತಾರು ವರ್ಷಗಳಿಂದ ರೈತರ ಬೇಸಾಯಕ್ಕೆ ವಿದ್ಯುತ್ ಕೊರತೆಯಿಂದಾಗಿ ಅನ್ನದಾತರ ಸಮಸ್ಯೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ಇಂದು ಸೋಮನಹಳ್ಳಿ ಬಳಿ 220 ಕೆ.ವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದ್ದು, ಇನ್ನು ಮುಂದೆ ವಿದ್ಯುತ್ ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎಂದರು.

ಮದ್ದೂರು ತಾಲೂಕು ಕೊನೇ ಭಾಗಕ್ಕೆ ಕೆ.ಆರ್.ಎಸ್ ಅಣೆಕಟ್ಟೆಯಿಂದ ನೀರು ಸರಾಗವಾಗಿ ಹರಿಯುವಂತೆ ಮಾಡಲು ನಾಲೆಗಳ ಅಭಿವೃದ್ಧಿಯಾಗಬೇಕಿದೆ. ಈಗಾಗಲೇ ಕಾವೇರಿ ನೀರಾವರಿ ನಿಗಮದ ವತಿಯಿಂದ 500 ಕೋಟಿಗೂ ಹೆಚ್ಚು ಅನುದಾನದಲ್ಲಿ ಕೆಮ್ಮಣ್ಣುನಾಲೆ, ಬೈರನ್ ನಾಲೆ, ಮದ್ದೂರು ಕೆರೆ, ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಅದೇ ರೀತಿ ವಿವಿಧ ನಾಲೆಗಳ ಅಭಿವೃದ್ಧಿ ಮತ್ತು ಶಿಂಷಾ ಬಲದಂಡೆ ಕೆರೆಗಳ ಪುನಶ್ಚೇತನಕ್ಕೆ ಅನುದಾನ ನೀಡುವಂತೆ ಕೋರಿದರು.

ಪಟ್ಟಣದ ಪೇಟೆ ಬೀದಿ ಅಗಲೀಕರಣಕ್ಕೆ ಅನುದಾನ, ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ, ಪಾಲಿಟೆಕ್ನಿಕ್ ಕಾಲೇಜು, ಕಾನೂನು ಕಾಲೇಜು, ನ್ಯಾಯಾಲಯ ಸಿಬ್ಬಂದಿಗಳಿಗೆ ವಸತಿಗೃಹ, ಭಾರತೀನಗರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಬೇಡಿಕೆಗಳ ಪಟ್ಟಿ ಸಲ್ಲಿಸಿದರು.

ಸಾಧನಾ ಸಮಾವೇಶದಲ್ಲಿ ಶಾಲಾ ಶಿಕ್ಷಣ ಇಲಾಖೆ ಮಳಿಗೆ ಆಕರ್ಷಣೀಯ

ಮದ್ದೂರು:

ತಾಲೂಕಿನ ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಣದ ಪ್ರಗತಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತು ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಳಿಗೆ ಹಾಕಿದ್ದು ಆಕರ್ಷಣೀಯವಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ ನೇತೃತ್ವದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಜೇಶ್ವರಿ ಹಾಗೂ ಅವರ ತಂಡದ ಸಂಪನ್ಮೂಲ ವ್ಯಕ್ತಿಗಳು ಸಮಾವೇಶಕ್ಕೆ ಬಂದ ಸಾರ್ವಜನಿಕರಿಗೆ ಶಿಕ್ಷಣದ ಮಹತ್ವ ಮತ್ತು ಸರ್ಕಾರದ ಶಾಲೆಗಳ ಕುರಿತು ಸಾಕಷ್ಟು ಉಪಯುಕ್ತ ಮಾಹಿತಿ ನೀಡಿದರು.

ಸಾರ್ವಜನಿಕರು ಸರ್ಕಾರದ ಕನ್ನಡ ಶಾಲೆಗಳ ಅಗತ್ಯತೆ ಮತ್ತು ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ಅರ್ಥೈಸಿಕೊಂಡು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಉತ್ತಮ ಶಿಕ್ಷಣ ನೀಡಲು ಹೆಚ್ಚು ಆಸಕ್ತಿ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ಹಾಗೂ ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿಗಳು ಮಳಿಗೆಗೆ ಭೇಟಿ ನೀಡಿ ಪ್ರಯತ್ನವನ್ನು ಶ್ಲಾಘಿಸಿದರು.ಬಿಪಿ, ಮಧುಮೇಹ ತಪಾಸಣೆ

ಮದ್ದೂರು:

ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲೂಕಿಗೆ ಭೇಟಿ ಹಿನ್ನೆಲೆಯಲ್ಲಿ ಸುಮಾರು 350ಕ್ಕೂ ಹೆಚ್ಚು ಸಾರ್ವಜನಿಕರಿಗೆ ಬಿಪಿ ಮತ್ತು ಶುಗರ್ (ಮಧುಮೇಹ) ತಪಾಸಣೆ ಮಾಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮೋಹನ್, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಬೆಟ್ಟಸ್ವಾಮಿ, ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿ ಡಾ.ರವಿಶಂಕರ್, ಆಡಳಿತ ವೈದ್ಯಾಧಿಕಾರಿ ಡಾ.ಭಾರ್ಗವಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕದಲೂರು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಗ್ರೂಪ್ ಡಿ ನೌಕರರು ಹಾಜರಿದ್ದರು.