ಕನ್ನಡಪ್ರಭ ವಾರ್ತೆ ಹರಿಹರ

ಕೈಗಾರಿಕೆಗಳ ಸ್ಥಾಪನೆಗಾಗಿ ಭೂಮಿ ಬ್ಯಾಂಕ್ ಸ್ಥಾಪಿಸಿರುವ ಮಾದರಿಯಲ್ಲಿ, ಕೊಳಗೇರಿ ನಿವಾಸಿಗಳಿಗೆ ವಸತಿ ವ್ಯವಸ್ಥೆ ರೂಪಿಸಲೂ ಸರ್ಕಾರ ಭೂಮಿ ಬ್ಯಾಂಕ್ ಯೋಜನೆ ಆರಂಭಿಸಬೇಕೆಂದು ಪ್ರಗತಿಪರ ಚಿಂತಕ, ಹೋರಾಟಗಾರ ಡಾ.ಸಿದ್ದನಗೌಡ ಪಾಟೀಲ್ ಹೇಳಿದರು.

ಸ್ಲಂ ಜನರ ಸಂಘಟನೆ, ಮಾನವ ಬಂಧುತ್ವ ವೇದಿಕೆ, ಆಕ್ಷನ್ ಏಡ್ ಪ್ರಾಜೆಕ್ಸ್ ಸಂಸ್ಥೆಗಳಿಂದ ಹೊರವಲಯದ ಮೈತ್ರಿವನದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ಲಂ ಜನರ ಭೂಮಿ, ವಸತಿ ಮತ್ತು ಸಂವಿಧಾನಾತ್ಮಕ ಹಕ್ಕುಗಳ ಕುರಿತು ರಾಜ್ಯಮಟ್ಟದ ಎರಡು ದಿನಗಳ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳು ಮುಂದೆ ಬಂದರೆ ಅವರಿಗೆ ಭೂಮಿ ಒದಗಿಸಲೆಂದೆ ರಾಜ್ಯದಲ್ಲಿ ಕೆಐಎಡಿಬಿ ಯಿಂದ 72 ಸಾವಿರ ಎಕರೆ ಭೂಮಿಯನ್ನು ಖರೀದಿಸಿ ಭೂಮಿ ಬ್ಯಾಂಕ್‌ನಲ್ಲಿ ಸಿದ್ಧವಾಗಿಡಲಾಗಿದೆ ಎಂದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತ ರಾಘವೇಂದ್ರ ಟಿ. ಮಾತನಾಡಿ, ರಾಜ್ಯದಲ್ಲಿ ಕೊಳಗೇರಿ ನಿವಾಸಿಗಳಿಗೆ ಈವರೆಗೆ 1.66 ಲಕ್ಷ ಹಕ್ಕುಪತ್ರ ನೀಡಲಾಗಿದೆ. ಈಚೆಗೆ ಹುಬ್ಬಳ್ಳಿಯಲ್ಲಿ 20 ಸಾವಿರ ಹಕ್ಕುಪತ್ರ ವಿತರಿಸಲಾಯಿತು. ರಾಜ್ಯದ ಕೊಳಗೇರಿಗಳಲ್ಲಿ4.92 ಲಕ್ಷ ಕಚ್ಚಾ ಅಥವಾ ಗುಡಿಸಲುಗಳಿವೆ. ಇವರೆಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಲು 35 ಸಾವಿರ ಕೋಟಿ ರು. ಅನುದಾನದ ಬೇಕಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.


ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ, ಸ್ಲಂ ಜನರ ಸಂಘಟನೆ ರಾಜ್ಯಾಧ್ಯಕ್ಷ ಐಸಾಕ್ ಅಮೃತ್ ರಾಜ್ ಎಲ್., ಆಕ್ಷನ್ ಏಡ್ ಸಂಸ್ಥೆಯ ರೇಷ್ಮಾ ಬಾನು, ದಾವಣಗೆರೆಯ ಜಬೀನಾ, ಕರಿಬಸಪ್ಪ, ಹಾವೇರಿಯ ಪಾರ್ವತಿ ಪೂಜಾರ್, ಹೊಸಪೇಟೆಯ ಕಲಬುರಗಿಯ ಅಲ್ಲಮಪ್ರಭು ನಿಂಬರ್ಗಾ, ಚಾಮರಾಜನಗರದ ಕವಿತಾ, ಚಿತ್ರದುರ್ಗದ ಮಂಜಣ್ಣ ಕೆಳಗಿನಮನೆ, ರಾಜೇಶ್ ಕೆ. ಇದ್ದರು.