ಸಾರಾಂಶ
ಪ್ರಗತಿ ಪರಿಶೀಲನೆ ಸಭೆ
ಕನ್ನಡಪ್ರಭ ವಾರ್ತೆ ಕುಷ್ಟಗಿಕೃಷ್ಣಾ ಬಿ ಸ್ಕೀಮ್ ಯೋಜನೆಯಲ್ಲಿ ಕೆರೆ ತುಂಬಿಸುವ ಯೋಜನೆಗೆ ಅನೇಕ ಭೂಮಿ ಗಳನ್ನು ವಶಪಡಿಸಿಕೊಂಡಿದ್ದು ಅದರ ಪರಿಹಾರ ಇಲ್ಲಿಯವರೆಗೆ ಬಂದಿರುವದಿಲ್ಲ ಕೂಡಲೇ ಪರಿಹಾರವನ್ನು ಒದಗಿಸುವ ಕೆಲಸ ಮಾಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಅವರು ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಪಟ್ಟಣದ ಸರ್ಕ್ಯೂಟ್ ಹೌಸಿನಲ್ಲಿ ಕೃಷ್ಣಾ ಬಿ ಸ್ಕೀಮ್ ಯೋಜನೆಯಲ್ಲಿ ಕೆರೆ ತುಂಬಿಸುವ ಯೋಜನೆ ಹಾಗೂ ಅನೇಕ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯು ನಡೆಯಿತು ಈ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರುತಾಲೂಕಿನಲ್ಲಿ ನಡೆದ ಕೆರೆ ತುಂಬಿಸುವ ಯೋಜನೆಯ ಅನುಷ್ಠಾನಕ್ಕಾಗಿ ಅನೇಕ ರೈತರು ತಮ್ಮ ಭೂಮಿಯನ್ನು ಕೊಟ್ಟಿದ್ದಾರೆ ಆದರೆ ಅವರಿಗೆ ಪರಿಹಾರ ಕೊಡುವಲ್ಲಿ ಇಲಾಖೆಯ ಅಧಿಕಾರಿಗಳು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಪರಿಹಾರದ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸಿ ಪರಿಹಾರ ಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಭೂಮಿಯನ್ನು ಕೊಟ್ಟ ರೈತರಿಗೆ ಪರಿಹಾರ ದೊರಕದ ಹಿನ್ನಲೆಯಲ್ಲಿ ಹಲವಾರು ರೈತರು ಕೆರೆ ತುಂಬಿಸುವ ಯೋಜನೇಯ ಜಾಕ್ ವೆಲ್ ಗೇಟು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು ಇದರಿಂದಾಗಿ ಯೋಜನೆಯ ಅನುಷ್ಠಾನದಲ್ಲಿ ಅನೇಕ ತೊಂದರೆಗಳು ಆಗುತ್ತವೆ ಆದ್ದರಿಂದ ಇರುವ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ ಪರಿಹಾರ ಕೊಡಿಸಬೇಕು ಎಂದರು.ಅಧಿಕಾರಿಗಳು ವಶಪಡಿಸಿಕೊಂಡ ಭೂಮಿಗಳು ಪೋಡಿಯಾಗದ ಹಿನ್ನಲೆಯಲ್ಲಿ ಕೆಲವು ರೈತರಿಗೆ ಬಂದಿರುವ ಪರಿಹಾರವನ್ನು ಪಡೆದುಕೊಳ್ಳಲು ಪಹಣಿಯಲ್ಲಿ ಜಂಟಿಯಾಗಿ ಬರುವಂತಹವರನ್ನು ಹುಡುಕಿಕೊಂಡು ಬಂದು ಪರಿಹಾರ ಪಡೆದುಕೊಳ್ಳಲು ಬಹಳಷ್ಟು ತೊಂದರೆಯಾಗುತ್ತಿದ್ದು ಇಂತಹ ಸಮಸ್ಯೆ ಇರುವ ರೈತರಿಗೆ ಪೋಡಿ ಮಾಡಿಕೊಡುವ ಮೂಲಕ ಪರಿಹಾರ ದೊರಕುವಂತೆ ಮಾಡಬೇಕು ಎಂದರು.
ಕುಷ್ಟಗಿ ತಾಲೂಕಿನ ಸುಮಾರು 18ಕೆರೆಗಳನ್ನು ತುಂಬಿಸುವ ಕೆಲಸ ವೇಗವಾಗಿ ನಡೆಯಬೇಕು ರೈತರಿಗೆ ಯಾವುದೇ ತೊಂದರೆಯಾಗಬಾರದು ಶೀಘ್ರದಲ್ಲಿ ಕೆಲಸ ನಡೆಯಬೇಕು ಎಂದರು.ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಇಒ ಪಂಪಾಪತಿ ಹಿರೇಮಠ ಅವರಿಗೆ ಸೂಚನೆ ನೀಡಿದರು.
ಕೆಬಿಜೆಎನ್ಎಲ್ ಅಧಿಕಾರಿಗಳು ಮಾತನಾಡಿ ತಾಲೂಕಿನ ಕೆಲವು ರೈತರು ಪೈಪುಗಳನ್ನು ಒಡೆಯುತ್ತಿದ್ದೂ ಇದರಿಂದ ಕೆರೆಗೆ ನೀರು ಮಂದಗತಿಯಿಂದ ಹೋಗುತ್ತಿರುವ ಹಿನ್ನಲೆಯಲ್ಲಿ ಕೆರೆ ತುಂಬಿಸುವ ಕಾಮಗಾರಿಯು ನಿಧಾನಗತಿಯಿಂದ ನಡೆಯುತ್ತಿದೆ ರೈತರು ಸಹಕಾರ ನೀಡುವಂತಾಗಬೇಕು ಹಾಗೂ ರೈತರಿಗೆ ಸೇರಬೇಕಾದ ಪರಿಹಾರ ಹಣವನ್ನು ಕಲ್ಪಿಸಲು ಕೆಲವು ತಾಂತ್ರಿಕ ಕಾರಣಗಳು ಹಾಗೂ ಅವರ ಪಹಣಿಗಳಲ್ಲಿ ಕೆಲವು ಲೋಪದೋಷಗಳು ಕಂಡು ಬರುತ್ತಿದ್ದು ಅವುಗಳನ್ನು ರೈತರು ಸರಿಪಡಿಸಿಕೊಳ್ಳಬೇಕು ಎಂದರು.ರೈತರ ಒತ್ತಾಯ : ಈ ಪ್ರಗತಿ ಪರಿಶೀಲನೆ ಸಭೆಗೆ ಕೆಲವು ರೈತರು ಆಗಮಿಸಿ ಪರಿಹಾರ ಹಣ ಸೇರಿದಂತೆ ಅನೇಕ ಕಾಮಗಾರಿ ಮಾಡಲು ಹೊಲಕ್ಕೆ ಉಂಟಾದ ಹಾನಿಯ ಬಗ್ಗೆ ತಿಳಿಸಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿ ಒತ್ತಾಯಿಸಿದರು. ಇದೆ ವೇಳೆ ಶಾಸಕ ದೊಡ್ಡನಗೌಡ ಪಾಟೀಲ ಅವರು ಅಧಿಕಾರಿಗಳಿಗೆ ಸಮಸ್ಯೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಅಶೋಕ ಶಿಗ್ಗಾಂವಿ, ತಾಪಂ ಇಒ ಪಂಪಾಪತಿ ಹಿರೇಮಠ, ಭೂ ಸ್ವಾಧೀನಅಧಿಕಾರಿ ಎಂ ಬಿ ನಾಗರಾಜ, ಕೆಬಿಜೆಎನ್ಎಲ್ ಇಇ ಸುರೇಂದ್ರ ರೆಡ್ಡಿ, ಎಇಇ ರಮೇಶ, ಚನ್ನಪ್ಪ, ಎ ಕೆ ನಾಯಕ, ಶಕುಂತಲಾ ಕತ್ತಿ, ಯಮನೂರಪ್ಪ, ಚಂದ್ರಕಲಾ, ಮಂಜುನಾಥ, ಅಶ್ವಥ್, ಕೊಟ್ರೇಶ, ಸಂಗಮೇಶ ಸೇರಿದಂತೆ ಹಲವರು ಇದ್ದರು.ಫೋಟೋ16kst1: ಕುಷ್ಟಗಿ ಪಟ್ಟಣದ ಸರ್ಕ್ಯೂಟ್ ಹೌಸಿನಲ್ಲಿ ನಡೆದ ಸಭೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು.