ಸಣ್ಣ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ: ಕರಿಯಲ್ಲಪ್ಪ ಕೆ.

| Published : May 13 2025, 01:35 AM IST

ಸಣ್ಣ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ: ಕರಿಯಲ್ಲಪ್ಪ ಕೆ.
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಉತ್ಪಾದಕರ ಸಂಸ್ಥೆಯ ಸದಸ್ಯರು ಕೇಂದ್ರದಿಂದ ಕೃಷಿ ಸಂಬಂಧಿತ ತರಬೇತಿ ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಅಧಿಕ ಲಾಭ ಗಳಿಸಬಹುದು.

ರಾಣಿಬೆನ್ನೂರು: ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಗ್ಗೂಡಿಸಿ ತಾಂತ್ರಿಕ ಸಲಹೆ ಮತ್ತು ಮಾರುಕಟ್ಟೆ ವ್ಯವಸ್ಥೆ ರೈತರಿಗೆ ಕಲ್ಪಿಸಬೇಕು ಎಂದು ಕೃಷಿ ಇಲಾಖೆ ಉಪನಿರ್ದೇಶಕ ಕರಿಯಲ್ಲಪ್ಪ ಕೆ. ತಿಳಿಸಿದರು.ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶಿವಮೊಗ್ಗದ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸಹಯೋಗದಲ್ಲಿ ಸೋಮವಾರ ಜಿಲ್ಲಾ ಅಮೃತ ರೈತ ಉತ್ಪಾದಕ ಕಂಪನಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಇಒ- ಡಿಇಒಗಳಿಗೆ ಏರ್ಪಡಿಸಿದ್ದ ಆಡಳಿತಾತ್ಮಕ ನಿರ್ವಹಣೆ ಮತ್ತು ವ್ಯಾಪಾರ ಅಭಿವೃದ್ಧಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಎಚ್. ಬಿರಾದಾರ ಮಾತನಾಡಿ, ರೈತ ಉತ್ಪಾದಕರ ಸಂಸ್ಥೆಯ ಸದಸ್ಯರು ಕೇಂದ್ರದಿಂದ ಕೃಷಿ ಸಂಬಂಧಿತ ತರಬೇತಿ ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ಅಧಿಕ ಲಾಭ ಗಳಿಸಬಹುದು ಎಂದರು. ಅಧ್ಯಕ್ಷತೆ ವಹಿಸಿದ್ದ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರೈತ ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಣ್ಣ ಹಾಗೂ ಅತಿ ಸಣ್ಣ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವಲ್ಲಿ ಒಬ್ಬಂಟಿಯಾಗಿ ಎದುರಿಸುವ ಹಲವಾರು ಸವಾಲುಗಳನ್ನು ಪರಿಹರಿಸುವುದಾಗಿದೆ. ಉತ್ಪಾದಕರ ಸಂಸ್ಥೆಯಾಗಿ ರೈತ ಉತ್ಪಾದಕರ ಸಂಘವು ಸ್ಥಳಿಯ ರೈತ ಸಮುದಾಯದ ಸಂಧಾನ ಸಾಮರ್ಥ್ಯವನ್ನು ಹಾಗೂ ವ್ಯವಹಾರಿಕ ಪಾಲುದಾರಿಕೆಯನ್ನು ಅಭಿವೃದ್ಧಿಗೊಳಿಸುವ ಮೂಲಕ ರೈತರ ಆರ್ಥಿಕ ಹಾಗೂ ಔದ್ಯಮಿಕ ಸಂಭಾವ್ಯ ಶಕ್ತಿಯನ್ನು ಸಡಿಲಿಸುವಂತೆ ಮಾಡುವುದಾಗಿದೆ. ಈ ಸಂಸ್ಥೆಗಳನ್ನು ಉತ್ಪಾದಕರ ಬೇಡಿಕೆಗೆ ಅನುಗುಣವಾಗಿ ಹಾಗೂ ಮೌಲ್ಯ ಸರಪಳಿಯ ಪದ್ಧತಿಯನ್ನು ಅಳವಡಿಸುವ ಮೂಲಕ ಉತ್ಪಾದಕರ ಆರ್ಥಿಕ ಹಾಗೂ ಸಾಮಾಜಿಕ ಲಾಭಗಳನ್ನು ಹೆಚ್ಚಿಸಲು ರೂಪಿಸಲಾಗಿದೆ ಎಂದರು.ಡಾ. ಶಂಭುಲಿಂಗ ಬಡ್ಡಿ, ಎಚ್.ಎಫ್. ಅಕ್ಕಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸುವೀರ್ ಹೆಗಡೆ, ಬಿ.ಟಿ. ಭದ್ರೀಶ್, ಶಿವಪ್ರಸಾದ ಸಿ., ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಕಾರ್ಯಾಗಾರದಲ್ಲಿ ಶಿವಮೊಗ್ಗದ ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೂಸೈಟಿ ನಿರ್ದೇಶಕರು, ಸಿಬ್ಬಂದಿ ಹಾಗೂ ಸುಮಾರು 50ಕ್ಕೂ ಅಧಿಕ ಜಿಲ್ಲಾ ಅಮೃತ ರೈತ ಉತ್ಪಾದಕ ಕಂಪನಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಇಒ- ಡಿಇಒಗಳು ಇದ್ದರು. ನರಸಿಂಹ ಜಯಂತಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ

ಸವಣೂರು: ಪಟ್ಟಣದ ಸತ್ಯಬೋಧ ಸ್ವಾಮೀಜಿ ಮೂಲ ವೃಂದಾವನ ಮಠದಲ್ಲಿ ನರಸಿಂಹ ಜಯಂತಿ ಅಂಗವಾಗಿ ಶನಿವಾರ ವಿಶೇಷ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಲಾಯಿತು.

ಶ್ರೀಮಠದಲ್ಲಿರುವ ಅಹೋಬಲ ಲಕ್ಷ್ಮೀನರಸಿಂಹ ದೇವರ ಸನ್ನಿಧಿಗೆ ವಿಶೇಷ ಫಲ ಪಂಚಾಮೃತವನ್ನು ಕೈಗೊಳ್ಳಲಾಯಿತು. ವಾಯುಸ್ತುತಿ ಪಠಣ ಪೂರ್ವಕ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಲಂಕಾರ, ನೈವೇದ್ಯ ಸಮರ್ಪಣೆ ನೆರವೇರಿಸಲಾಯಿತು. ಪ್ರಮೋದಾಚಾರ ರಾಯಚೂರ ಉಪನ್ಯಾಸ ನೀಡಿ, ನರಸಿಂಹ ಜಯಂತಿಯ ಮಹತ್ವ ಹಾಗೂ ಗುರುಗಳ ಮಹಿಮೆಯ ಬಗ್ಗೆ ವಿವರಿಸಿದರು.ಶ್ರೀಮಠದ ಪೂಜಾ ಪರ್ಯಾಯಸ್ಥ ಅವಿನಾಶ ಆಚಾರ್ಯ ರಾಯಚೂರ ಹಾಗೂ ಅಭಿಷೇಕ ಆಚಾರ್ಯ ರಾಯಚೂರ ನೇತೃತ್ವ ವಹಿಸಿದ್ದರು.ಅರ್ಚಕ ರಂಗಾಚಾರ್ಯ ರಾಯಚೂರ ನರಸಿಂಹ ಜಯಂತಿಯ ವಿಧಿ ವಿಧಾನಗಳನ್ನು ಕೈಗೊಂಡರು. ತೀರ್ಥ ಪ್ರಸಾದ ವಿತರಣೆ ಕೈಗೊಳ್ಳಲಾಯಿತು. ಪ್ರಮುಖರಾದ ವೆಂಕಟೇಶ ನಾಯಕ, ಪ್ರಮೋದ ರಾಯಚೂರ, ಪ್ರವೀಣ ಆಚಾರ್ಯ ಆಯಿ, ಪವಮಾನ ಆಚಾರ್ಯ ನಾಮಾವಳಿ, ನಾಗೇಶ ಪಾಟೀಲ, ಪಾಂಡುರಂಗ ರಿತ್ತಿ, ಕೇಶವ ಪಡಸಲಗಿ, ಪ್ರವೀಣ ಕುಲಕರ್ಣಿ ಹಾಗೂ ಇತರರು ಪಾಲ್ಗೊಂಡಿದ್ದರು.