ಹೊರಗುತ್ತಿಗೆ ನೌಕರರಿಗೆ ಕನಿಷ್ಠ ಸೌಲಭ್ಯ ನೀಡಿ

| Published : Aug 19 2025, 01:00 AM IST

ಸಾರಾಂಶ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ, ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ, ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೇರಿದ್ದ ಹೊರಗುತ್ತಿಗೆ ಹಾಸ್ಟೆಲ್‌ ನೌಕರರು ಸರಕಾರಿ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿಗೆ ತರಬೇಕು. ಮಾಸಿಕ 36 ಸಾವಿರ ರು. ವೇತನ ನೀಡಬೇಕು, ನಿವೃತ್ತಿಯವರೆಗೆ ಸೇವಾಭದ್ರತೆ ಒದಗಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ,ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಸುಮಾರು 20 ವರ್ಷಗಳಿಂದ ಯಾವುದೇ ಸೇವಾ ಭದ್ರತೆ ಇಲ್ಲದೇ ದಿನದ 14 ಗಂಟೆ ಕೆಲಸ ಮಾಡುತ್ತಿರುವ ಅಡುಗೆಯವರು, ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಅಟೆಂಡರ್, ಡಿ.ಗ್ರೂಪ್ ಹೊರಗುತ್ತಿಗೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೇವಾ ಭದ್ರತೆಯಿಲ್ಲ, ಕನಿಷ್ಠ ವೇತನವೂ ಇಲ್ಲ. ಒಬ್ಬ ನೌಕರನಿಗೆ 10,500 ರುಗಳಿಂದ 14,500 ರುಪಾಯಿಗಳು ಲಭಿಸುತ್ತಿವೆ. ಆದರೆ ಏಜೆನ್ಸಿಯವರಿಗೆ ಓರ್ವ ವ್ಯಕ್ತಿಗೆ 18 ಸಾವಿರ ರು. ವರೆಗೆ ಪಾವತಿಸಲಾಗುತ್ತಿದೆ. ಇ.ಎಸ್.ಐ, ಪಿ.ಎಫ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅತ್ಯಂತ ಕಷ್ಟದಿಂದ ದುಡಿಯುತ್ತಿದ್ದಾರೆ. ಇಎಸ್‌ಐಗೆ ಸರಿಯಾಗಿ ಪಾವತಿಯಾಗದೆ, ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸೆಯೂ ದೊರೆಯುತ್ತಿಲ್ಲ ಎಂದು ದೂರಿದರು.

ಮಾನವ ಸಂಪನ್ಮೂಲದ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಸ್ಥಳೀಯರಲ್ಲ. ಇ.ಎಸ್.ಐ ಮತ್ತು ಪಿಎಫ್ ಬಗ್ಗೆ ಒಂದು ಸಣ್ಣ ತಪ್ಪು ಆದರೂ ಮೈಸೂರು, ಇಲ್ಲ ದಾವಣಗೆರೆ ಇಂತಹ ಕಡೆಗಳಿಗೆ ತಿದ್ದುಪಡಿ ಮಾಡಿಸಿಕೊಂಡು ಬರಬೇಕು. ಇದು ನಮ್ಮಂತಹ ಬಡ ನೌಕರರಿಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಎಷ್ಟೋ ನೌಕರರು ಸಾಲ ಮಾಡಿ, ಆಸ್ಪತ್ರೆಯ ಬಿಲ್ ಭರಿಸಿದ್ದಾರೆ. ಜಿಲ್ಲಾಡಳಿತ ಈ ಶೋಷಣೆಯನ್ನು ತಪ್ಪಿಸಿ, ವೇತನವನ್ನು ನೇರವಾಗಿ ನೌಕರರ ಖಾತೆಗೆ ಜಮಾ ಮಾಡುವಂತಾಗಬೇಕು. ಸೇವಾ ಭದ್ರತೆ ಇದ್ದರೆ ಇನ್ನೂ ಹೆಚ್ಚಿನ ದಕ್ಷತೆಯಿಂದ ಕೆಲಸ ಮಾಡಲು ಸಾಧ್ಯ. ಜಿಲ್ಲಾಡಳಿತ ತಮ್ಮ ಹಂತದಲ್ಲಿ ಈಡೇರಿಸುವ ಕೆಲವು ಬೇಡಿಕೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ನಮ್ಮ ಸಂಘದ ಮುಖಂಡರ ಸಮ್ಮುಖದಲ್ಲಿ ನಡೆಸಿ ನೌಕರರ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ಶಿವಣ್ಣ, ಗೋವಿಂದರಾಜು, ಶಂಕರ್, ಕುಮಾರ್, ರವಿಕುಮಾರ್.ಟಿ.ಎನ್., ಚಂದ್ರಕಲಾ, ಪ್ರಭ, ನರಸಿಂಹಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.