ಸಾರಾಂಶ
ಆಯುಷ್ಮಾನ್ ಭಾರತ್ ಯೋಜನೆಯ ಕುಂದುಕೊರತೆಗಳ ಸಭೆ
ಕನ್ನಡಪ್ರಭ ವಾರ್ತೆ ಮಣಿಪಾಲಬಡವರ ಆರೋಗ್ಯ ಸಮಸ್ಯೆಗಳಿಗೆ ತುರ್ತು ಪರಿಹಾರ ನೀಡಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿದ್ದಾರೆ. ಇದರ ಲಾಭ ಬಡವರಿಗೆ ಸಿಗಬೇಕಾದರೆ ಆಸ್ಪತ್ರೆಗಳು ಕೈ ಜೋಡಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.ಅವರು ರಜತಾದ್ರಿಯ ಜಿ.ಪಂ.ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಆಯುಷ್ಮಾನ್ ಭಾರತ್ ಯೋಜನೆಯ ಕುಂದುಕೊರತೆಗಳ ಸಭೆ ನಡೆಸಿದರು.ಉಡುಪಿ ಜಿಲ್ಲೆಯಲ್ಲಿ ಆಭಾ ಯೋಜನೆಗೆ ಸಂಬಂಧಪಟ್ಟಂತೆ ನ್ಯೂರೋ ಮತ್ತು ಎನ್‌ಐಸಿಯು ಬೆಡ್‌ಗಳಿಗಾಗಿ ಮಣಿಪಾಲ ಕೆಎಂಸಿ ಮಣಿಪಾಲವನ್ನು ಮಾತ್ರ ಆಶ್ರಯಿಸಬೇಕಿದೆ. ಇದರಿಂದ ಅಲ್ಲಿ ಕೂಡ ಒತ್ತಡ ಆಗುತ್ತಿದ್ದು, ಉಡುಪಿ ಜಿಲ್ಲೆಯ ರೋಗಿಗಳನ್ನು ಮಂಗಳೂರಿನ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಅರ್ಹ ಆಸ್ಪತ್ರೆಗಳೂ ಆಭಾ ಯೋಜನೆ ಜಾರಿಗೊಳಿಸಬೇಕು ಎಂದು ಅವರು ಸೂಚಿಸಿದರು.ಇದಕ್ಕೆ ಉತ್ತರಿಸಿದ ಡಿಎಚ್‌ಓ ಈಶ್ವರಪ್ಪ ಗಡಾದ್ ತಾಂತ್ರಿಕ ಕಾರಣಗಳಿಂದ ಜಿಲ್ಲೆಯ ಇತರ ಆಸ್ಪತ್ರೆಗಳನ್ನು ಆಭಾ ಯೋಜನೆಯಡಿ ತರಲು ವಿಳಂಬವಾಗಿತ್ತು. ಇದೀಗ ಆಯ್ಕೆ ಪೂರ್ಣಗೊಂಡಿದ್ದು, ಅನುಮತಿಗಾಗಿ ಕಾಯಲಾಗುತ್ತಿದೆ ಎಂದರು. ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಜನರೂ ಉನ್ನತ ಚಿಕಿತ್ಸೆಗಾಗಿ ಕೆಎಂಸಿಗೆ ಬರುತ್ತಾರೆ. ಇದರಿಂದ ಆಭಾ ಯೋಜನೆಯಡಿ ಉಡುಪಿ ಜಿಲ್ಲೆಯ ರೋಗಿಗಳಿಗೆ ಹಾಸಿಗೆ ಸಿಗುತ್ತಿಲ್ಲ, ಆದ್ದರಿಂದ ಉಡುಪಿ ಜಿಲ್ಲೆಯವರಿಗೆ ಹಾಸಿಗೆ ಕಾದಿರಿಸಬೇಕು ಎಂದ ಸಭೆಯಲ್ಲಿ ಅಭಿಪ್ರಾಯವ್ಯಕ್ತವಾಯಿತು.ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಆರೋಗ್ಯ ಸೇವೆ ಎನ್ನುವುದು ಎಲ್ಲರಿಗೂ ಅಗತ್ಯ ಸೇವೆಯಾದ್ದರಿಂದ ಒಂದು ಜಿಲ್ಲೆಯವರಿಗೆ ಮೀಸಲಿಡುವುದು ಸರಿಯಲ್ಲ ಎಂದರು.ಇದಕ್ಕೆ ಸಂಸದರು, ಹಾಸಿಗೆ ಕಾದಿರಿಸುವುದು ಕಷ್ಟವಾದರೂ, ಉಡುಪಿ ಜಿಲ್ಲೆಯ ತುರ್ತು ರೋಗಿಗಳಿಗೆ ಬೇರೆ ವಿಭಾಗದ ಹಾಸಿಗೆ ಹೊಂದಾಣಿಕೆ ಮಾಡಬೇಕು ಎಂದರು. ಇದಕ್ಕೆ ಕೆಎಂಸಿ ಪ್ರತಿನಿಧಿಗಳು, ಅಗತ್ಯವಿದ್ದಾಗ ಬೆಡ್‌ಗಳನ್ನು ವ್ಯವಸ್ಥೆ ಮಾಡಿದ್ದೇವೆ ಎಂದರು.
ಅಪಘಾತಗಳಿಗೆ ಸಂಬಂಧಿಸಿದ ಹರೀಶ್, ಸಾಂತ್ವಾನ ಯೋಜನೆಯನ್ನು ಉಡುಪಿ ಜಿಲ್ಲೆಯ ಯಾವ ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿಲ್ಲ. ಸಾಂತ್ವಾನ ಯೋಜನೆಯಡಿ ಕೇವಲ ೪೮ ಗಂಟೆಗಳ ಚಿಕಿತ್ಸೆಗೆ ಮಾತ್ರ ಅವಕಾಶವಿದೆ. ಆ ಬಳಿಕದ ಚಿಕಿತ್ಸೆಯ ಶುಲ್ಕ ಭರಿಸುವ ಬಗ್ಗೆ ಗೊಂದಲ ಇದೆ ಎಂದು ಆಭಾ ಯೋಜನೆಯ ನೋಡಲ್ ಅಧಿಕಾರಿ ಡಾ. ಲತಾ ಸಭೆಯ ಗಮನಕ್ಕೆ ತಂದರು.ಈ ಬಗ್ಗೆ ಸಂಸದರು ಆರೋಗ್ಯ ಇಲಾಖೆಯ ಆಯುಕ್ತರ ಜೊತೆ ಚರ್ಚೆ ನಡೆಸಿ ಈ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಅಂತಿಮವಾಗಿ ಆಭಾ ಯೋಜನೆಗೆ ಹೆಚ್ಚುವರಿ ಹಾಸಿಗೆ ಒದಗಿಸಲು ಮತ್ತು ಜಿಲ್ಲೆಯ ಇತರ ಆಸ್ಪತ್ರೆಗಳನ್ನು ನೊಂದಾಯಿಸಲು ನಿರ್ಣಯ ಕೈಗೊಳ್ಳಲಾಯಿತು.ಈ ಸಭೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಕೆಎಂಸಿ ಆಸ್ಪತ್ರೆಯ ಆಭಾ ವಿಭಾಗದ ಡಾ.ಪ್ರಜ್ಞಾ ಮತ್ತು ಸಚಿನ್ ಕಾರಂತ್ ಮತ್ತಿತರರು ಹಾಜರಿದ್ದರು.