ಪಿಡಿಒ ಹುದ್ದೆ ಪರೀಕ್ಷೆಗೆ ಅಗತ್ಯ ಸೌಲಭ್ಯ ಕಲ್ಪಿಸಿ

| Published : Dec 05 2024, 12:32 AM IST

ಸಾರಾಂಶ

ಪರೀಕ್ಷಾ ದಿನದಂದು ಮಾರ್ಗಾಧಿಕಾರಿಗಳ ತಂಡದ ಬೆಂಗಾವಲಿಗೆ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಅವಶ್ಯಕತೆಗೆ ಅನುಗುಣವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಬೇಕು ಹಾಗೂ ಪರೀಕ್ಷಾ ಕೇಂದ್ರ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸಾರ್ವಜನಿಕ ನಿಷೇಧಿತವಾಗಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

2023-24ನೇ ಸಾಲಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಆಯ್ಕೆಯ ಪೂರ್ವಭಾವಿ ಪರೀಕ್ಷೆಯು ಇದೇ ಡಿಸೆಂಬರ್ ಮಾಹೆಯ 7 ಮತ್ತು 8 ರಂದು ರಾಜ್ಯಾದ್ಯಂತ ನಡೆಯುತ್ತಿದ್ದು, ಸದರಿ ಪರೀಕ್ಷೆಯು ಜಿಲ್ಲೆಯಲ್ಲಿ ಯಾವುದೇ ಲೋಪದೋಷವಾಗದಂತೆ ಸುಮಗವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಪರೀಕ್ಷಾ ಕರ್ತವ್ಯಕ್ಕೆ ನೇಮಿಸಲ್ಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ "ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿಕ್ಕಬಳ್ಳಾಪುರ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಡಿಸೆಂಬರ್ 7 ರಂದು 10 ಪರೀಕ್ಷಾ ಕೇಂದ್ರಗಳಲ್ಲಿ 4,149 ವಿದ್ಯಾರ್ಥಿಗಳು ಕನ್ನಡ ಭಾಷಾ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದರು.

ಅಗತ್ಯ ಸೌಲಭ್ಯ ಕಲ್ಪಿಸಿ

ಡಿಸೆಂಬರ್ 8ರ ಭಾನುವಾರ ದಂದು 17 ಪರೀಕ್ಷಾ ಕೇಂದ್ರಗಳಲ್ಲಿ 6,841 ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲಿದ್ದಾರೆ. ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಮೂಲಭೂತ ಸೌಕರ್ಯಗಳು ವ್ಯವಸ್ಥೆಯಾಗಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಪರೀಕ್ಷಾ ದಿನದಂದು ಮಾರ್ಗಾಧಿಕಾರಿಗಳ ತಂಡದ ಬೆಂಗಾವಲಿಗೆ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಅವಶ್ಯಕತೆಗೆ ಅನುಗುಣವಾಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಬೇಕು ಹಾಗೂ ಪರೀಕ್ಷಾ ಕೇಂದ್ರ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸಾರ್ವಜನಿಕ ನಿಷೇಧಿತವಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್, ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವ ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮರಿಸ್ವಾಮಿ ಮತ್ತಿತರರು ಇದ್ದರು.