ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಆಟೋ ರಿಕ್ಷಾಗಳು ಕಡ್ಡಾಯವಾಗಿ ಮೀಟರ್ ಆಧಾರದಲ್ಲಿ ಸಂಚರಿಸಬೇಕು. ನಗರ ವ್ಯಾಪ್ತಿಯಲ್ಲಿ ಪ್ರಾರಂಭಿಕವಾಗಿ 1.6 ಕಿಲೋ ಮೀಟರ್‌ಗೆ ₹37 ತದನಂತರ ಪ್ರತಿ ಕಿಲೋ ಮೀಟರ್‌ಗೆ ₹15 ದರವನ್ನು ಅನುಸರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ರೋಷನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಆಟೋರಿಕ್ಷಾಗಳು ಮುಂದಿನ 15 ದಿನಗಳೊಳಗೆ ನಿಯಮಾನುಸಾರ ಮೀಟರ್ ಲೆಕ್ಕದಲ್ಲಿ ಸಂಚರಿಸುವಂತೆ ಅಗತ್ಯ ಕ್ರಮಕೈಗೊಳ್ಳಬೇಕು. ಬೈಕ್, ಬಿಳಿ ನೋಂದಣಿ ಫಲಕ ಹೊಂದಿರುವ ಮೋಟಾರ್ ಕಾರು ಹಾಗೂ ರ್ಯಾಪಿಡೊ ಮಾದರಿಯ ಖಾಸಗಿ ವಾಹನಗಳಿಗೆ ಪ್ರಯಾಣಿಕರ ವಾಣಿಜ್ಯ ಸೇವೆ ನಡೆಸಲು ಅವಕಾಶವಿಲ್ಲ. ಇಂತಹ ವಾಹನಗಳು ನಿಯಮ ಉಲ್ಲಂಘಿಸಿ ಸಂಚರಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಆಟೋರಿಕ್ಷಾ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಗರದಲ್ಲಿ ಯಾವುದೇ ರೀತಿಯ ವಾದ-ವಿವಾದ ಅಥವಾ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಸಂಚಾರ ವ್ಯವಸ್ಥೆ ಸುಗಮವಾಗಲು ಟ್ರಾಫಿಕ್ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಕೋರಿದರು.ಈ ಕುರಿತು ಕಳೆದೆಂಟು ತಿಂಗಳ ಹಿಂದೆಯೇ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಆದರೂ ಇನ್ನೂ ಕೆಲವು ವಾಹನಗಳು ನಿಯಮ ಪಾಲನೆ ಮಾಡದಿರುವುದು ಕಂಡು ಬಂದಿದ್ದು, ಸಂಬಂಧಿತ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ನಗರದಲ್ಲಿ ಹೊಸ ಆಟೋರಿಕ್ಷಾಗಳ ನೋಂದಣಿಗೆ ಅವಕಾಶ ನೀಡಬಾರದು. ಆಟೋ ಅಸೋಸಿಯೇಷನ್ ಹಾಗೂ ಆಟೋ ಡೀಲರ್‌ಗಳೊಂದಿಗೆ ಸಭೆ ನಡೆಸಿ, ನೋಂದಣಿ ಅವಧಿ ಮುಗಿದ ಯೋಗ್ಯವಲ್ಲದ ಆಟೋರಿಕ್ಷಾಗಳಿಗೆ ಮರು ನೋಂದಣಿಗೆ ಅವಕಾಶ ನೀಡದಂತೆ ಕ್ರಮವಹಿಸಬೇಕು. ಕಳೆದ ಹಲವು ವರ್ಷಗಳಿಂದ ನೋಂದಣಿ ನವೀಕರಿಸದೆ ನಗರದಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳನ್ನು ಗುರುತಿಸಿ, ಅವುಗಳನ್ನು ಗುಜರಿ ಮಾಡಲು ಆಟೋ ಅಸೋಸಿಯೇಷನ್‌ಗಳಿಗೆ ಸೂಚನೆ ನೀಡಬೇಕು.
ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಸಾರಿಗೆ ಅಧಿಕಾರಿ ನಾಗೇಶ್ ಮುಂಡಾಸ ಸೇರಿಯಂತೆ ಆಟೋರಿಕ್ಷಾ ಸಂಘಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.