ಸಾರಾಂಶ
ಹುಬ್ಬಳ್ಳಿ:
ಬ್ಯಾಂಕ್‌ಗಳು ಪೊಲೀಸರ ಮೂಲಕವೇ ಭದ್ರತೆ ವ್ಯವಸ್ಥೆ ಮಾಡುವುದಷ್ಟೇ ಅಲ್ಲ, ತಮ್ಮ ಸುರಕ್ಷತೆಗೆ ಖಾಸಗಿ ಏಜನ್ಸಿಗಳ ಮೂಲಕ ಬೇಕಾದ ಅಗತ್ಯ ಭದ್ರತೆ ಒದಗಿಸಿಕೊಳ್ಳುವಂತೆ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸಲಹೆ ನೀಡಿದರು.ಹು-ಧಾ ಪೊಲೀಸ್ ಆಯುಕ್ತಾಲಯ ವತಿಯಿಂದ ಬಿವಿಬಿ ಕಾಲೇಜಿನಲ್ಲಿ ಸೋಮವಾರ ಬ್ಯಾಂಕ್, ಸೆಕ್ಯೂರಿಟಿ ಏಜೆನ್ಸಿ, ಕರೆನ್ಸಿ ಚೆಸ್ಟ್ ಏಜೆನ್ಸಿ ಮತ್ತು ಲೀಡ್ ಬ್ಯಾಂಕ್‌ಗಳ ಸುರಕ್ಷತಾ ಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಬ್ಯಾಂಕ್ ಸೇರಿ ಇತರ ಹಣಕಾಸು ಸಂಸ್ಥೆಗಳು ಭದ್ರತೆ ವಿಷಯದಲ್ಲಿ ಮೈ ಮರೆಯಬಾರದು. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದ ಅವರು, ಭದ್ರತಾ ಏಜೆನ್ಸಿಗಳ ಸಭೆಯನ್ನು ಶೀಘ್ರವೇ ಕರೆಯುವಂತೆ ಡಿಸಿಪಿಗಳಿಗೆ ಸೂಚಿಸಿದರು.ಎಸ್‌ಪಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಜಿಲ್ಲಾದ್ಯಂತ 5 ದರೋಡೆ ಪ್ರಕರಣ ನಡೆದಿದ್ದು ಒಂದಕ್ಕೆ ಚಾರ್ಜ್‌ಶೀಟ್ ಹಾಕಲಾಗಿದೆ. ಉಳಿದ 4 ಪ್ರಕರಣ ಪತ್ತೆಯಾಗಿಲ್ಲ. ಇದು ಪೊಲೀಸರ ವೈಫಲ್ಯ ಎಂದುಕೊಳ್ಳಬಾರದು. ಹಣಕಾಸು ಸಂಸ್ಥೆಗಳು ಪ್ರಕರಣ ದಾಖಲಿಸಿದರೆ ಸಾಲದು, ಭದ್ರತೆ ವಿಷಯದಲ್ಲಿ ತಾವು ಕೂಡ ಹಲವು ಕ್ರಮಕೈಗೊಳ್ಳಬೇಕು. ಮತ್ತೆ ಇಂತಹ ಪ್ರಕರಣಗಳು ನಡೆದರೆ ಬ್ಯಾಂಕಿಂಗ್ ಕ್ಷೇತ್ರದವರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್. ರವೀಶ ಮಾತನಾಡಿ, ಹಣ ಕಳೆದುಕೊಂಡರು ಇನ್ಶೂರೆನ್ಸ್ ಮೂಲಕ ವಾಪಸ್ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಪಡೆಯಬಹುದು. ಆದರೆ, ಪ್ರಾಣ ಕಳೆದುಕೊಂಡರೆ ಮರಳಿ ಪಡೆಯಲಾಗದು. ಈ ನಿಟ್ಟಿನಲ್ಲಾದರೂ ಭದ್ರತೆ ಒದಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ಮಾತನಾಡಿ, ಭದ್ರತೆ ವಿಷಯದಲ್ಲಿ ಬ್ಯಾಂಕ್‌ಗಳು ಲೋಪವೆಸಗುತ್ತಿಲ್ಲ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸ್ವಯಂ ಭದ್ರತೆ ಒದಗಿಸಿಕೊಳ್ಳುವತ್ತ ಹೆಚ್ಚಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾಂವಿ, ಎಎಸ್‌ಪಿ ನಾರಾಯಣ ಭರಮನಿ, ಎಸಿಪಿ ಶಿವಪ್ರಕಾಶ ನಾಯಕ್ ಸೇರಿದಂತೆ 250ಕ್ಕೂ ಅಧಿಕ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ರಾಜ್ಯದಲ್ಲಿ ದರೋಡೆ ಪ್ರಕರಣ ನಡೆಯುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ನಗರದಲ್ಲಿರುವ ಬ್ಯಾಂಕ್‌ಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಭೆ ನಡೆಸಿ ಸಲಹೆ-ಸೂಚನೆ ನೀಡಲಾಗಿದೆ. ಹಣ, ಚಿನ್ನ ಸಾಗಾಟದ ವೇಳೆ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಅಧಿಕಾರಿಗಳು ಪೊಲೀಸ್ ಇಲಾಖೆಯಿಂದಲೂ ಸಹಕಾರ ಕೇಳಿದ್ದಾರೆ. ಪೊಲೀಸ್ ಇಲಾಖೆ ಮತ್ತು ಬ್ಯಾಂಕ್ ಅಧಿಕಾರಿಗಳ ಜಂಟಿ ಭದ್ರತಾ ಆಡಿಟ್ ಮಾಡಿ ವರದಿ ಸಿದ್ಧಪಡಿಸಲಾಗುತ್ತದೆ ಎಂದರು.