, ಹೆಣ್ಣು ಮಕ್ಕಳಿಗೆ 18 ವರ್ಷದೊಳಗೆ ಮದುವೆ ಮಾಡಲು ಪ್ರಯತ್ನ ಪಟ್ಟರೆ ಅದು ಕಾನೂನು ಪ್ರಕಾರ ಅಪರಾಧ. ಅಂತಹವರಿಗೆ ಜಾಮೀನು ಸಹ ಸಿಗುವುದಿಲ್ಲ. ಆದ್ದರಿಂದ ಯಾರೂ ಸಹ ಬಾಲ್ಯ ವಿವಾಹವನ್ನು ಪ್ರೋತ್ಸಾಹಿಸಬಾರದು. ಇಂತಹ ಘಟನೆಗಳು ಯಾರ ಗಮನಕ್ಕೆ ಬಂದರೂ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು .

ಕನ್ನಡಪ್ರಭ ವಾರ್ತೆ, ತುಮಕೂರು

ಪ್ರತಿ ಮಗುವಿಗೂ ಪೌಷ್ಟಿಕ ಆಹಾರ ನೀಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ. ಸಿದ್ದರಾಮಯ್ಯ ತಿಳಿಸಿದರು.

ತಾಲೂಕಿನ ಹೆಬ್ಬಾಕ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಪೋಷಕರು ಮತ್ತು ಮಕ್ಕಳು ಜಂಕ್ ಫು‌ಡ್‌ಗಳಿಗೆ ಮಾರು ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ಕಾರಣ ಜಂಕ್ ಫುಡ್‌ಗಳನ್ನು ಸೇವಿಸಬಾರದು. ಬದಲಾಗಿ ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಪ್ರತಿ ಮನೆಯಲ್ಲೇ ಇರುವ ಬೆಲ್ಲ, ಕಡಲೆಬೀಜ, ಹೆಸರು ಕಾಳುಗಳನ್ನು ಸೇವಿಸಿದರೆ ಪೌಷ್ಟಿಕತೆ ಹೆಚ್ಚುತ್ತದೆ. ಇದರೊಂದಿಗೆ ನವಣೆ ಸೇರಿ ಸಿರಿಧಾನ್ಯ ಆಹಾರದಲ್ಲಿ ಬಳಸುವಂತೆಯೂ ಅವರು ತಿಳಿಸಿದರು.

ಈ ಹಿಂದೆ ಸಿರಿಧಾನ್ಯ ಬಡವರ ಆಹಾರವಾಗಿದ್ದವು. ಈಗ ಶ್ರೀಮಂತರ ಆಹಾರ ಧಾನ್ಯಗಳಾಗಿ ಮಾರ್ಪಟ್ಟಿವೆ. ಇದರ ಬೆಲೆ ದುಬಾರಿಯಾಗಿದೆ ಎಂದು ತಿಳಿಸಿದರು.

ನಮ್ಮ ಜೀವನದಲ್ಲಿ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಳ್ಳಬಾರದು. ಇದೇ ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ಒಂದು ಬಾರಿ ಆರೋಗ್ಯ ಹದಗೆಟ್ಟರೆ ಸರಿಪಡಿಸುವುದು ಇಂದು ಬಹಳ ಕಷ್ಟವಾಗುತ್ತಿದೆ. ಆದ್ದರಿಂದ ಯಾರೂ ಸಹ ದುರಭ್ಯಾಸಗಳಿಗೆ ಮಾರು ಹೋಗಬಾರದು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಮಾತನಾಡಿ, ಹೆಣ್ಣು ಮಕ್ಕಳಿಗೆ 18 ವರ್ಷದೊಳಗೆ ಮದುವೆ ಮಾಡಲು ಪ್ರಯತ್ನ ಪಟ್ಟರೆ ಅದು ಕಾನೂನು ಪ್ರಕಾರ ಅಪರಾಧ. ಅಂತಹವರಿಗೆ ಜಾಮೀನು ಸಹ ಸಿಗುವುದಿಲ್ಲ. ಆದ್ದರಿಂದ ಯಾರೂ ಸಹ ಬಾಲ್ಯ ವಿವಾಹವನ್ನು ಪ್ರೋತ್ಸಾಹಿಸಬಾರದು. ಇಂತಹ ಘಟನೆಗಳು ಯಾರ ಗಮನಕ್ಕೆ ಬಂದರೂ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಅನುಷಾ, ಕೋರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಇಂದು, ಹಿರಿಯ ಪತ್ರಕರ್ತ ಎಚ್.ಎನ್. ಮಲ್ಲೇಶ್, ಹೆಬ್ಬಾಕ ಸಿಎಚ್ಓ ಪ್ರಿಯ, ಅಂಗನವಾಡಿ ಕಾರ್ಯಯಕರ್ತೆಯರಾದ ಲೀಲಾವತಿ, ಕಮಲಮ್ಮ, ಗೀತಾ, ಜಯಲಕ್ಷ್ಮಮ್ಮ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.