ಕನ್ನಡಪ್ರಭ ವಾರ್ತೆ ಸವದತ್ತಿಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಗಿಸಲು ಸೂಕ್ತ ಅವಕಾಶಗಳನ್ನು ಕಲ್ಪಿಸಿದರೆ, ಅವರು ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಬಲ್ಲರು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಸಾಗಿಸಲು ಸೂಕ್ತ ಅವಕಾಶಗಳನ್ನು ಕಲ್ಪಿಸಿದರೆ, ಅವರು ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಬಲ್ಲರು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಪಟ್ಟಣದ ಗುರುಭವನದಲ್ಲಿ ವಿಶ್ವಾಸ ವೈದ್ಯ ಗ್ರೂಪ್, ಮಹಾಲಕ್ಷ್ಮಿ ರಿಕ್ರಿಯೇಷನ್ ಕ್ಲಬ್ ಹಾಗೂ ರೇಣುಕಾದೇವಿ ಫೌಂಡೇಶನ್ ಸವದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಮ್ಮ ಜನ್ಮದಿನದ ಅಂಗವಾಗಿ ಸ್ನೇಹಿತರೆಲ್ಲರೂ ಸೇರಿ ಮಹಿಳೆಯರಿಗಾಗಿ ಉಚಿತ ಹೊಲಿಗೆ ತರಬೇತಿ ಶಿಬಿರ ಆಯೋಜಿಸಿರುವುದು ಸಂತಸ ತಂದಿದೆ. ಮಹಿಳೆಯರ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಲಾಗಿರುವ ಈ ಶಿಬಿರವನ್ನು ನಿರಂತರವಾಗಿ ಮುಂದುವರಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಶಿಬಿರದ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಉತ್ತಮ ಅವಕಾಶಶಿಬಿರದ ಸಾನ್ನಿಧ್ಯ ವಹಿಸಿದ್ದ ಗುರ್ಲಹೊಸೂರಿನ ರಾಜಾರಾಮಠದ ಗಂಗಾಧರ ದೀಕ್ಷಿತರು ಮಾತನಾಡಿ, ಆರ್ಥಿಕವಾಗಿ ಸಬಲರಾಗಲು ಬಯಸುವ ಮಹಿಳೆಯರಿಗೆ ಈ ತರಬೇತಿ ಶಿಬಿರ ಉತ್ತಮ ಅವಕಾಶವಾಗಿದೆ. ಮಹಿಳೆಯರು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೌಶಲ್ಯ ಕಲಿತು ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.ಬೆಳಗಾವಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಶ್ವಿನಿ ಬೆಳವಡಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿದ್ದಾರೆ. ಮಹಿಳೆಯರಿಗೆ ಅನುಕಂಪ ತೋರುವುದಕ್ಕಿಂತ ಅವರ ಸಾಮರ್ಥ್ಯವನ್ನು ಗುರುತಿಸಿ ಸೂಕ್ತ ಅವಕಾಶಗಳನ್ನು ಕಲ್ಪಿಸುವ ಕಾರ್ಯಗಳು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.ರೂಪ ಕೂಡಲಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಅಶ್ವಥ್ ವೈದ್ಯ, ಶಿವಾನಂದ ಹೂಗಾರ, ಶಿವಾನಂದ ಪಟ್ಟಣಶೆಟ್ಟಿ, ಚಂದ್ರಣ್ಣ ಶಾಮರಾಯನವರ, ಎಂ.ಕೆ. ಬೇವೂರ, ಮಂಜುನಾಥ ಪಾಚಂಗಿ, ಭರಮಪ್ಪ ಅಣ್ಣಿಗೇರಿ, ಶಿವನಗೌಡ ಪಾಟೀಲ್, ಮಲ್ಲು ಜಕಾತಿ, ಸುನಿಲ ತಾರಿಹಾಳ, ವನಜಾಕ್ಷಿ ಸಾಬಣ್ಣವರ ಹಾಗೂ ಶಿವಾನಂದ ತಾರೀಹಾಳ, ಸಂಜು ಪಾಚಂಗಿ ಉಪಸ್ಥಿತರಿದ್ದರು.ಹುಸೇನಸಾಬ ನದಾಫ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.