ದಾವಣಗೆರೆ ಮಹಾನಗರದ ನಿವೇಶನ ಮತ್ತು ವಸತಿ ವಂಚಿತರಿಗೆ ಶಾಶ್ವತವಾಗಿ ಕುಟುಂಬಕ್ಕೊಂದು ಸೂರು ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
- ಮಹಾನಗರ ಪಾಲಿಕೆಗೆ ಭೂಮಿ-ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಆಗ್ರಹ । ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ- - -
ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಮಹಾನಗರದ ನಿವೇಶನ ಮತ್ತು ವಸತಿ ವಂಚಿತರಿಗೆ ಶಾಶ್ವತವಾಗಿ ಕುಟುಂಬಕ್ಕೊಂದು ಸೂರು ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.ಇಲ್ಲಿನ ಪಾಲಿಕೆ ಆವರಣದಲ್ಲಿ ಸಂಘಟನೆ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನಿವೇಶನ ಮತ್ತು ವಸತಿ ವಂಚಿತರು ತಮಗೊಂದು ಸೂರು ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಾಲಿಕೆ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಇದೇ ವೇಳೆ ಸಮಿತಿ ರಾಜ್ಯ ಸಂಚಾಲಕ ಕುಮಾರ್ ಸಮತಳ ಮಾತನಾಡಿ, ದಾವಣಗೆರೆ ಮಹಾನಗರದ ನಿವೇಶನ, ವಸತಿ ವಂಚಿರಿಗೆ ಶಾಶ್ವತವಾಗಿ ಕುಟುಂಬಕ್ಕೊಂದು ಸೂರು ಕಲ್ಪಿಸಬೇಕು. 1939ರಿಂದಲೂ ನಗರಸಭೆಯಾಗಿದ್ದ ದಾವಣಗೆರೆ 1997ರಲ್ಲಿ ಜಿಲ್ಲಾ ಕೇಂದ್ರವಾಗಿ 3 ದಶಕವಾಗುತ್ತಿದೆ. 2007ರಲ್ಲಿ ಪಾಲಿಕೆಯಾಗಿ ಮೇಲ್ದರ್ಜೆಗೇರಿ 2 ದಶಕ, ಸ್ಮಾರ್ಟ್ ಸಿಟಿಯಾಗಿ 10 ವರ್ಷ ಕಳೆದಲೂ ಜನರಿಗೆ ಸೌಲಭ್ಯ, ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ ಎಂದರು.ಕಾರ್ಮಿಕರ ನಗರವಾಗಿದ್ದ ಇಲ್ಲಿ ಹತ್ತಿ ಗಿರಣಿ, ಜಿನ್ನಿಂಗ್ ಮಿಲ್ ಸೇರಿದಂತೆ ಹಲವಾರು ಕೈಗಾರಿಕೆ ಅವಲಂಭಿಸಿ, ಹತ್ತಾರು ಸಾವಿರ ಕುಟುಂಬ ಬದುಕು ಕಟ್ಟಿಕೊಂಡಿದ್ದವು. ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ದೊಡ್ಡ ಮಹಲುಗಳನ್ನು ಕಟ್ಟಿದ ಕಟ್ಟಡ ಕಾರ್ಮಿಕರು, ಸಾರಿಗೆ ಸಂಬಂಧಿತ ನೌಕರರು, ಗ್ಯಾರೇಜ್ ಮೆಕ್ಯಾನಿಕ್ಗಳು, ಟೈಲರ್, ಮನೆಗೆಲಸವರು, ಬೀಡಿ ಕಾರ್ಮಿಕರು, ಆಟೋ- ಕಾರು- ಲಾರಿ- ಬಸ್ಸು ಚಾಲಕರು, ನಿರ್ವಾಹಕರು, ಲಕ್ಷಾಂತರ ಸಂಖ್ಯೆಯ ಅಸಂಘಟಿತ ಕಾರ್ಮಿಕರು ಬಾಡಿಗೆ ಗೂಡಿನಲ್ಲಿ ವಾಸಿಸುತ್ತಿದ್ದಾರೆ. ಇಂದಿಗೂ ಸ್ವಂತ ಸೂರು ಎಂಬುದೇ ಇಲ್ಲದಂತೆ ಜೀವನ ನಡೆಸುತ್ತಿದ್ದಾರೆ ಎಂದು ದೂರಿದರು.
ದಾವಣಗೆರೆ ಹಳೆ ಊರು, ಹೊಸ ಊರು ಎಂಬುದಾಗಿ ಅಭಿವೃದ್ಧಿಯಲ್ಲಿ ತಾರತಮ್ಯ ಕಾಣುತ್ತಿದೆ. ಹಳೆ ಭಾಗ ಇಂದಿಗೂ ಮೂಲ ಸೌಕರ್ಯ ವಂಚಿತವಾಗಿದೆ. 70-80ರ ದಶಕದಲ್ಲಿ ನಗರಸಭೆ ಅಧ್ಯಕ್ಷರಾಗಿದ್ದ ಪಂಪಾಪತಿ ಹತ್ತಾರು ಹೊಸ ನಗರಗಳ ಸ್ಥಾಪಿಸಿ, ಮಿಲ್ ಕಾರ್ಮಿಕರಿಗೆ ಆಶ್ರಯ ನೀಡಿದ್ದರು. ನಗರಾದ್ಯಂತ ಸಾವಿರಾರು ಮರ, ಗಿಡ ಬೆಳೆಸಿದ್ದರು. ಈ ಹಿಂದೆ ಕೆ.ಶಿವರಾಂ ಜಿಲ್ಲಾಧಿಕಾರಿ ಆಗಿದ್ದ ವೇಳೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ 5-10 ಸಾವಿರ ಆಶ್ರಯ ಮನೆ ನಿರ್ಮಾಣಕ್ಕೆ ಕಾರಣರಾದರು. ವರ್ಷ ವರ್ಷಕ್ಕೂ ಜನಸಂಖ್ಯೆ ಹೆಚ್ಚುತ್ತಿದ್ದು, ನಿವೇಶನ, ಸೂರು ವಂಚಿತರ ಕುಟುಂಬಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ದಕ್ಷಿಣ ಕ್ಷೇತ್ರದಲ್ಲೇ ಹೆಚ್ಚು ಎಂದು ಅವರು ತಿಳಿಸಿದರು.ಜಿಲ್ಲಾ ಕೇಂದ್ರದ ಸುಮಾರು 20 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ನಿವೇಶನದ ಅವಶ್ಯಕತೆ ಇದೆ. ಜಿಲ್ಲಾ ಕೇಂದ್ರದಿಂದ 6-8 ಕಿಮೀ ವ್ಯಾಪ್ತಿಯ ಆವರಗೆರೆ, ತೋಳಹುಣಸೆ, ಎಚ್.ಕಲ್ಪನಹಳ್ಳಿ ಪ್ರದೇಶ, ಬಾತಿ, ಆವರಗೊಳ್ಳ, ಕಕ್ಕರಗೊಳ್ಳ, ಚಿಕ್ಕಬೂದಿಹಾಳ್, ಎಲೆಬೇತೂರು, ಬಿ-ಕಲ್ಪನಹಳ್ಳಿ ಸುತ್ತಮುತ್ತಲ ಸರ್ಕಾರಿ ಜಾಗಗಳಲ್ಲಿ ನಿವೇಶನಗಳಿಗೆಂದೇ ಭೂಮಿ ಕಾಯ್ದಿರಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಸತೀಶ ಅರವಿಂದ, ಕರ್ನಾಟಕ ಜನಶಕ್ತಿಯ ಪವಿತ್ರ, ಆದಿಲ್ ಖಾನ್, ಸೈಯದ್ ಅಶ್ಫಾಕ್, ರಾಮಾಂಜನೇಯ, ಜಾಫರ್ ಶರೀಫ್, ಶಿಡ್ಲಪ್ಪ, ವೆಂಕಟೇಶ, ಸಮೀರ್, ನಾಜೀಮಾ ಬಾನು, ರಹಮತ್ ಬೀ, ಮಾಲನ್, ಶಮೀಮ್, ನಸೀಮಾ, ಶೃತಿ, ಗೌರಮ್ಮ, ಸಾಕಮ್ಮ, ಜಯಮ್ಮ, ಪುಷ್ಪಾ, ಲಕ್ಷ್ಮಿ, ಬೀ ಬೀ ಆಯಿಷಾ, ಸಲ್ಮಾ ಸೇರಿದಂತೆ ನಿವೇಶನ ರಹಿತರು ಪಾಲ್ಗೊಂಡಿದ್ದರು.- - -
* ಬೇಡಿಕೆಗಳೇನು?- ರಾಜೀವ್ ಗಾಂಧಿ ವಸತಿ ಯೋಜನೆಯಡಿ ಶಾಶ್ವತ ಆಶ್ರಯ ಮನೆ ನಿರ್ಮಿಸಿಕೊಡಬೇಕು.
- ಆದಷ್ಟು ಬೇಗನೆ ಸಂಘಟನೆ ಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಭೆ ಕರೆದು, ಸರ್ಕಾರದ ಆದೇಶಗಳ ಸಾಧ್ಯಸಾಧ್ಯತೆ ಬಗ್ಗೆ ಚರ್ಚಿಸಬೇಕು.- ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೂ ಮನೆ ನಿರ್ಮಿಸಿ, ಕೊಡಬೇಕು.
- ಪಾರದರ್ಶಕವಾಗಿ ನೈಜ ಫಲಾನುಭವಿಗಳ ಸರ್ವೇ ನಡೆಸಬೇಕು.- ಪ್ರತಿ ಕುಟುಂಬಕ್ಕೂ 20-30 ಅಡಿ ಅಳತೆ ನಿವೇಶನ ಅಥವಾ ಮನೆ ನೀಡಬೇಕು.
- - --12ಕೆಡಿವಿಜಿ3: ದಾವಣಗೆರೆ ಪಾಲಿಕೆ ಆವರಣದಲ್ಲಿ ಗುರುವಾರ ನಿವೇಶನ, ವಸತಿ ವಂಚಿತರಿಗೆ ಸೂರು ಕಲ್ಪಿಸುವಂತೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಪ್ರತಿಭಟಿಸಲಾಯಿತು.