ಮಕ್ಕಳ ಭವಿಷ್ಯಕ್ಕೆ ಗುಣಮಟ್ಟ ಶಿಕ್ಷಣ ನೀಡಿ

| Published : Mar 21 2024, 01:00 AM IST

ಸಾರಾಂಶ

ಲೋಕಾಪುರ: ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಲಹೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಕುರಿ ಮತ್ತು ಉಣ್ಣೆ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಲಹೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಕುರಿ ಮತ್ತು ಉಣ್ಣೆ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.

ಪಟ್ಟಣದ ವಿದ್ಯಾಚೇತನ ಪೂರ್ವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾಚೇತನ ನವೋದಯ ತರಬೇತಿ ಕೇಂದ್ರ ಸಹಯೋಗದಲ್ಲಿ ಜ್ಞಾನ ಸಂಭ್ರಮ-೨೦೨೪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಲಕರು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಪಾಲಕರ ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಲ್ಲಿ ಪಾಲಕರು ಶಿಕ್ಷಣದ ಅರಿವು ಮೂಡಿಸಬೇಕು. ವಿದ್ಯಾಚೇತನ ಶಿಕ್ಷಣ ಸಂಸ್ಥೆ ವತಿಯಿಂದ ಜ್ಞಾನ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ಉತ್ತಮವಾಗಿದೆ. ಮುಂದಿನ ದಿನಮಾನಗಳಲ್ಲಿ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಮಕ್ಕಳಿಗೆ ಸನ್ಮಾನ:ಈ ಸಂದರ್ಭದಲ್ಲಿ ವಿದ್ಯಾಚೇತನ ಸಂಸ್ಥೆಯಲ್ಲಿ ವಿಶೇಷ ಅಧ್ಯಯನ ಮತ್ತು ತರಬೇತಿ ಪಡೆದು ರಾಜ್ಯದ ಪ್ರತಿಷ್ಠಿತ ಶಾಲೆಗಳಿಗೆ ಆಯ್ಕೆಯಾಗಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಉತ್ತಮವಾಗಿ ಬೋಧಿಸಿದ ಶಿಕ್ಷಕವೃಂದವನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಜ್ಞಾನೇಶ್ವರ ಮಠದ ಪೀಠಾಧಿಕಾರಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಆದರ್ಶ ವಿದ್ಯಾಲಯ ಪ್ರಾಚಾರ್ಯ ಎಸ್.ಕೆ. ಸತ್ತಿಗೇರಿ, ಅಂಜುಮನ್-ಏ-ಇಸ್ಲಾಂ ಕಮೀಟಿ ಅಧ್ಯಕ್ಷ ಅಲ್ಲಾಸಾಬ ಯಾದವಾಡ, ಲೋಕಾಪುರ ಘಟಕ ಕಸಾಪ ಗೌರವ ಕಾರ್ಯದರ್ಶಿ ಪ್ರವೀಣ ಗಂಗಣ್ಣವರ, ಮಂಜುನಾಥ ಪಾಟೀಲ, ಮಹೇಶ ಮಳಲಿ, ವಿದ್ಯಾಚೇತನ ಸಂಸ್ಥಾಪಕ ಅಧ್ಯಕ್ಷ ಎಸ್.ಎಂ. ರಾಮದುರ್ಗ, ಉಪಾಧ್ಯಕ್ಷ ಕಮಾಲಸಾಬ ಡಂಗಿ, ಪಾಲಕರು, ಶಿಕ್ಷಕವೃಂದ, ಮಕ್ಕಳು ಇದ್ದರು. ವಿದ್ಯಾಚೇತನ ಸಂಸ್ಥಾಪಕ ಅಧ್ಯಕ್ಷ ಎಸ್.ಎಂ. ರಾಮದುರ್ಗ ಸ್ವಾಗತಿಸಿದರು. ವಿವೇಕ ಮರಾಠಿ ವಂದಿಸಿದರು.