ತಾಲೂಕಾಸ್ಪತ್ರೆಯಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಿ-ಡಾ. ಬಸವರಾಜ

| Published : Jul 15 2024, 01:48 AM IST

ತಾಲೂಕಾಸ್ಪತ್ರೆಯಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಿ-ಡಾ. ಬಸವರಾಜ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ತಿಂಗಳೂ ಕಡ್ಡಾಯವಾಗಿ ಆರೋಗ್ಯ ರಕ್ಷಾ ಸಮಿತಿಯ ಸಭೆ ನಡೆಸಿ, ಸಲಹೆ, ಸೂಚನೆ ಪಡೆದುಕೊಳ್ಳಬೇಕು. ತಾಲೂಕಾಸ್ಪತ್ರೆಯಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ, ಚಿಕಿತ್ಸೆ ದೊರಕುವಂತೆ ಕಾಳಜಿ ವಹಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಇಲ್ಲಿನ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಬಸವರಾಜ ಎಚ್.ಡಿ. ಅವರಿಗೆ ಸೂಚಿಸಿದರು.

ಹಾನಗಲ್ಲ: ಪ್ರತಿ ತಿಂಗಳೂ ಕಡ್ಡಾಯವಾಗಿ ಆರೋಗ್ಯ ರಕ್ಷಾ ಸಮಿತಿಯ ಸಭೆ ನಡೆಸಿ, ಸಲಹೆ, ಸೂಚನೆ ಪಡೆದುಕೊಳ್ಳಬೇಕು. ತಾಲೂಕಾಸ್ಪತ್ರೆಯಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ, ಚಿಕಿತ್ಸೆ ದೊರಕುವಂತೆ ಕಾಳಜಿ ವಹಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಇಲ್ಲಿನ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಬಸವರಾಜ ಎಚ್.ಡಿ. ಅವರಿಗೆ ಸೂಚಿಸಿದರು.

ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದ ಅವರು, ತಾಲೂಕಿನಲ್ಲಿ ಡೆಂಘೀ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಸಹಜವಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬೆಡ್‌ಗಳ ಕೊರತೆಯಾಗದಂತೆ ನೋಡಿಕೊಳ್ಳಿ. ಚಿಕಿತ್ಸೆಯಲ್ಲಿಯೂ ಸಹ ಲೋಪ ಕಂಡುಬರಬಾರದು. ಸುಮ್ಮನೆ ರೋಗಿಗಳು, ರೋಗಿಗಳ ಸಂಬಂಧಿಗಳನ್ನು ಅಲೆಯಿಸದೇ ಸ್ಪಂದಿಸಿ, ಸಹಕರಿಸಿ ಎಂದರು.

ತಾಲೂಕಾಸ್ಪತ್ರೆಯ ಆಗು, ಹೋಗುಗಳ ಬಗ್ಗೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಗಮನಕ್ಕೆ ತನ್ನಿ. ಸದಸ್ಯರ ಸಹಕಾರ ಪಡೆದುಕೊಳ್ಳಿ. ಅಗತ್ಯ ಮೂಲಸೌಲಭ್ಯ ಕಲ್ಪಿಸಲು ತಾವೂ ಸಹ ಗಮನ ನೀಡಿದ್ದಾಗಿ ತಿಳಿಸಿದ ಶ್ರೀನಿವಾಸ ಮಾನೆ, ಅರವಳಿಕೆ ತಜ್ಞರ ಕೊರತೆಯಿಂದ ಶಸ್ತ್ರಚಿಕಿತ್ಸೆ ನೆರವೇರಿಸುವುದು ಕಷ್ಟಸಾಧ್ಯವಾಗಿತ್ತು. ಆದರೀಗ ಅರವಳಿಕೆ ತಜ್ಞರ ನಿಯೋಜನೆಯಾಗಿದ್ದು, ಆದಷ್ಟು ಇಲ್ಲಿಯೇ ಶಸ್ತ್ರಚಿಕಿತ್ಸೆ ನೆರವೇರಿಸಿ, ಹಾವೇರಿ, ಹುಬ್ಬಳ್ಳಿ, ಶಿರಸಿ ಸೇರಿದಂತೆ ಇನ್ನಿತರ ನಗರ ಪ್ರದೇಶಗಳಿಗೆ ರೋಗಿಗಳನ್ನು ಕಳುಹಿಸಬೇಡಿ ಎಂದರು.

ನಿತ್ಯವೂ ಆಸ್ಪತ್ರೆಗೆ ಆಗಮಿಸುವ ಹೊರರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರಸ್ತುತ ೬೦೦ಕ್ಕೂ ಹೆಚ್ಚು ರೋಗಿಗಳು ಹೊರ ವಿಭಾಗದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಲಭ್ಯ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಉತ್ತಮ ಸೇವೆಗೆ ವೈದ್ಯರು, ಸಿಬ್ಬಂದಿ ಕಾಳಜಿ ವಹಿಸಿದ್ದಾಗಿ ಆಡಳಿತ ವೈದ್ಯಾಧಿಕಾರಿ ಡಾ. ಬಸವರಾಜ ಎಚ್.ಡಿ. ಇದೇ ಸಂದರ್ಭದಲ್ಲಿ ತಿಳಿಸಿದರು.

ವೈದ್ಯರಾದ ಡಾ. ಹರೀಶಕುಮಾರ, ಡಾ. ಅನ್ನಪೂರ್ಣ, ಡಾ.ಶಿವಕುಮಾರ ಶಿವೂರ, ಡಾ. ಶಶಿಧರ, ಡಾ. ಅಖಿಲೇಷ ಮಾಳೋದೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವಿನಯ ಬಂಕನಾಳ, ರೇಣುಕಾ ಚಾಕಾಪೂರ, ಪ್ರದೀಪ ಹರಿಜನ, ಇರ್ಫಾನ್ ಸೌದಾಗರ, ಖಾಲಿದ್‌ಅಹ್ಮದ್ ಶೇಷಗಿರಿ, ಬಸವರಾಜ ದುಮ್ಮಣ್ಣನವರ ಈ ಸಂದರ್ಭದಲ್ಲಿದ್ದರು.