ಕಾನೂನುಬದ್ದ, ಸುರಕ್ಷಿತ ಮತ್ತು ಕಳಂಕವಿಲ್ಲದ ಗರ್ಭಪಾತ ಸೇವೆಗಳು ಪ್ರತಿಯೊಬ್ಬ ಮಹಿಳೆಯರಿಗೂ ತಲುಪುವಂತೆ ಮಾಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ಹಿಂದಿನ ದಿನಗಳಲ್ಲಿ ಗರ್ಭಪಾತವನ್ನ ಸಾಂಪ್ರದಾಯಿಕವಾಗಿ ಮನೆಗಳಲ್ಲಿ ಮಾಡುತ್ತಿದ್ದರು. ಇದರಿಂದಾಗಿ ಅನೇಕ ತಾಯಂದಿರು ಮರಣ ಹೊಂದುತ್ತಿದ್ದರು. ಈಗ ಗರ್ಭಪೂರ್ವ ಮತ್ತು ಪ್ರಸವಪೂರ್ವ ಬ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯಡಿ ಗರ್ಭದಲ್ಲಿರುವ ಮಗುವಿನ ಲಿಂಗಪತ್ತೆ ಮಾಡಿ ಗರ್ಭಪಾತ ಮಾಡುವುದನ್ನು ನಿಷೇಧಿಸಿದೆ. ಏನೆ ಇದ್ದರೂ ಕಾನೂನಾತ್ಮಕವಾಗಿ ತಜ್ಞರಿಂದ ಅವಶ್ಯವಿದ್ದಲ್ಲಿ ಸುರಕ್ಷಿತ ಗರ್ಭಪಾತ ಮಾಡಿಸಬೇಕು. ಅಸುರಕ್ಷಿತ ಗರ್ಭಪಾತದಿಂದ ಗರ್ಭಾಶಯಕ್ಕೆ ಸೋಂಕು ತಗುಲಿ ಮರಣ ಸಂಭವಿಸುತ್ತದೆ. ಆದ್ದರಿಂದ ಈಗ ಎಲ್ಲರೂ ಒಗಟ್ಟಿನಿಂದ ಕಾರ್ಯಾಚರಣೆ ಮಾಡಿ, ಸುರಕ್ಷಿತವಾದ ಗರ್ಭಪಾತ ಸೇವೆ ನೀಡಬೇಕೆಂದು ಡಿಎಚ್‌ಒ ಡಾ. ಎಸ್‌.ಎಸ್. ನೀಲಗುಂದ ತಿಳಿಸಿದರು.

ನಗರದ ಗುರಮ್ಮ ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಐಇಸಿ ವಿಭಾಗ, ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವೆಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಭಾರ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ. ಎಚ್.ಎಲ್. ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾನೂನುಬದ್ದ, ಸುರಕ್ಷಿತ ಮತ್ತು ಕಳಂಕವಿಲ್ಲದ ಗರ್ಭಪಾತ ಸೇವೆಗಳು ಪ್ರತಿಯೊಬ್ಬ ಮಹಿಳೆಯರಿಗೂ ತಲುಪುವಂತೆ ಮಾಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಬೆಂಗಳೂರಿನ ಸಮಗ್ರ ಗರ್ಭಪಾತ ಕಾರ್ಯಕ್ರಮದ ತಾಂತ್ರಿಕ ಘಟಕದ ಸಲಹೆಗಾರ ದೊಡ್ಡನಗೌಡ ಜಿ. ಮಾತನಾಡಿ, ಅಸುರಕ್ಷಿತ ಗರ್ಭಪಾತದಿಂದ ಶೇ.8ರಷ್ಟು ಮರಣ ಸಂಭವಿಸುತ್ತಿವೆ. ಇವುಗಳನ್ನು ತಡೆಗಟ್ಟಲು ಸಮಗ್ರ ಮಾಹಿತಿಯನ್ನು ಸಮುದಾಯಕ್ಕೆ ತಿಳಿಸಿ ಮರಣ ತಪ್ಪಿಸಬೇಕೆಂದು ಹಾಗೂ ಸುರಕ್ಷಿತ ಗರ್ಭಪಾತ ಪ್ರತಿ ಮಹಿಳೆಯರ ಆರೋಗ್ಯದ ಹಕ್ಕು ಎಂದರು.

ಸ್ತ್ರೀರೋಗ ತಜ್ಞೆ ಡಾ. ಸುನಿತಾ ಎಚ್. ಉಪನ್ಯಾಸ ನೀಡಿದರು. ಕೃಷ್ಣ ಗುಜ್ಜರ, ರೂಪಸೇನಾ ಚವಾಣ, ಪುಷ್ಪಾ ಪಾಟೀಲ, ಡಾ. ಮಹೇಶ ಕೊಪ್ಪಳ, ಜ್ಯೋತಿ ಹೊಸಮನಿ, ಶಾರದಾ ಪಾಟೀಲ ಸೇರಿ ಇತರರಿದ್ದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಫ್. ಹನಕನಹಳ್ಳಿ ಸ್ವಾಗತಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ನಿರೂಪಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಗಡಾದ ವಂದಿಸಿದರು.