ರಾಜ್ಯದಲ್ಲಿ ಅತಿಥಿ ಉಪನ್ಯಾಸರಿಗೆ ಸೇವಾ ಭದ್ರತೆ ನೀಡಿ: ಆಯನೂರು ಮಂಜುನಾಥ್‌

| Published : Jan 02 2024, 02:15 AM IST

ರಾಜ್ಯದಲ್ಲಿ ಅತಿಥಿ ಉಪನ್ಯಾಸರಿಗೆ ಸೇವಾ ಭದ್ರತೆ ನೀಡಿ: ಆಯನೂರು ಮಂಜುನಾಥ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರನ್ನು ದೇವರು ಎಂದೇ ಪರಿಗಣಿಸುವ ದೇಶದಲ್ಲಿ ಬೋಧನೆ ಕೆಲಸ ಮಾಡುವವರು ಅನುಭವಿಸುತ್ತಿರುವ ಬವಣೆ ಗಮನಿಸಿದಾಗ ನಮ್ಮ ಭಾವನೆ ತಪ್ಪು ಎಂದೆನಿಸುತ್ತದೆ. ಇಂಥ ಭಾವನೆ ಬೆಳೆಯಲು ಕಾರಣವಾಗುವುದು ಸರ್ಕಾರಗಳು. ಇಂದು ಎಷ್ಟೋ ಶಾಲೆ, ಕಾಲೇಜುಗಳಲ್ಲಿ ಸರಿಯಾದ ಸಂಖ್ಯೆಯ ಬೋಧಕರಿಲ್ಲದೇ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಇದಕ್ಕೆ ಕಾರಣ ಸೇವಾ ಅಭದ್ರತೆಯೇ ನಿಜ. ಶಿವಮೊಗ್ಗದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ್‌ ಅತಿಥಿ ಉಪನ್ಯಾಸಕರ ಬೆಂಬಲಕ್ಕೆ ನಿಂತಿದ್ದು, ಸರ್ಕಾರದ ಸ್ಪಂದನೆಗಳು ತೃಪ್ತಿ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ರಾಜ್ಯದಲ್ಲಿ ಎಲ್ಲ ಕಾಲೇಜುಗಳಲ್ಲೂ ಅತಿಥಿ ಉಪನ್ಯಾಸಕ ಅವಶ್ಯಕತೆ ಎದ್ದುಕಾಣುತ್ತಿದೆ. ಕಾಯಂ ಉಪನ್ಯಾಸಕರಂತೆ ಕೆಲಸ ಮಾಡಿದರೂ ಅವರಿಗೆ ಯಾವ ಸೌಲಭ್ಯವೂ ಇಲ್ಲವಾಗಿದೆ. ಈಗ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಆಶ್ವಾಸನೆಗಳು ಸಮಾಧಾನಕರವೇ ಹೊರತು, ತೃಪ್ತಿದಾಯಕವಲ್ಲ ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಸುಧಾಕರ್ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಆದರೆ, ಸರ್ಕಾರ ಘೋಷಣೆ ಮಾಡಿರುವ ಎಲ್ಲ ಯೋಜನೆಗಳು ಅತಿಥಿ ಉಪನ್ಯಾಸಕರನ್ನು ತಲುಪಬೇಕಾದರೆ ಅವರಿಗೆ ಮೊದಲು ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಈಗ ನೀಡುತ್ತಿರುವ 10 ತಿಂಗಳ ವೇತನದ ಬದಲಾಗಿ 12 ತಿಂಗಳ ವೇತನ ನೀಡಬೇಕು. ಕಾಯಂ ಉಪನ್ಯಾಸಕಿಯರಿಗೆ ಇರುವಂತೆ ಅತಿಥಿ ಉಪನ್ಯಾಸಕರಿಗೂ ವೇತನ ಸಹಿತ ಹೆರಿಗೆ ರಜೆಯನ್ನು ಕಡ್ಡಾಯವಾಗಿ ನೀಡಬೇಕು. ಖಾಸಗಿ ಕಂಪನಿಯ ಉದ್ಯೋಗಿಗಳು ಕೆಲಸ ಬಿಟ್ಟಾಗ ಗ್ರ್ಯಾಚುಟಿ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಅತಿಥಿ ಉಪನ್ಯಾಸಕರಿಗೂ ನೀಡಿದರೆ ಇಡುಗಂಟು ನೀಡಬೇಕು. 60 ವರ್ಷದವರೆಗೆ ಅತಿಥಿ ಉಪನ್ಯಾಸಕರನ್ನು ತೆಗೆದು ಹಾಕುವುದಿಲ್ಲ ಎಂಬ ಭರವಸೆ ಸರ್ಕಾರ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯಸರ್ಕಾರ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅರುಣ್ ಮಾತನಾಡಿ, ಸರ್ಕಾರದ ಈ ನಿರ್ಧಾರದಿಂದ ನಮಗೆ ಸಮಧಾನವಾಗಿಲ್ಲ. ಪ್ರತಿವರ್ಷ ನಮ್ಮನ್ನು ಎರಡು ತಿಂಗಳ ಕಾಲ ತೆಗೆದುಹಾಕಲಾಗುತ್ತದೆ. ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬಹುದು, ತೆಗೆದುಕೊಳ್ಳದೇ ಇರಬಹುದು. ಹಾಗಾದಾಗ 10 ವರ್ಷ ಸೇವೆ ಸಲ್ಲಿಸುವುದು ಹೇಗೆ? ಪ್ರತಿ ವರ್ಷವು ನಮಗೆ ಸಂಕಟ ತಪ್ಪಿದ್ದಲ್ಲ ಎಂದು ಅಳಲು ತೋಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಉಪಾಧ್ಯಕ್ಷೆ ಸುರೈಯ ಬೇಗಂ, ಅನುದಾನ ಶಿಕ್ಷಣ ಸಂಸ್ಥೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಬಾಲಕೃಷ್ಣ ಹೆಗಡೆ ಇದ್ದರು.

- - -

ಕೋಟ್‌

ಮುಷ್ಕರ ನಿರತ ಅತಿಥಿ ಉಪನ್ಯಾಸಕರು ಜನವರಿ 1ರಿಂದ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕೆಲಸದಿಂದ ತೆಗೆಯುವುದಾಗಿ ಸಚಿವರು ಹೇಳಿದ್ದಾರೆ. ಇಂತಹ ಕಠಿಣ ನಿಲುವು ತಳೆಯದೇ ಮತ್ತೊಮ್ಮೆ ಮಾತುಕತೆ ನಡೆಸಬೇಕು

- ಆಯನೂರು ಮಂಜುನಾಥ್‌, ಮಾಜಿ ಸಂಸದ

- - - (-ಫೋಟೋ: ಆಯನೂರು ಮಂಜುನಾಥ್‌)