ಅಲೆಮಾರಿ ಸಮುದಾಯಗಳಿಗೆ ಸೂರು ಕಲ್ಪಿಸಿ: ಪಲ್ಲವಿ

| Published : Mar 14 2025, 12:34 AM IST

ಸಾರಾಂಶ

ಜಿಲ್ಲೆಯ ಅಲೆಮಾರಿ ಸಮುದಾಯಗಳಿಗೆ ಸೂರು ಕಲ್ಪಿಸುವುದನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕು.

ಅಲೆಮಾರಿ ಅಭಿವೃದ್ಧಿ ನಿಗಮದಿಂದ ಜಾರಿಯಾದ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ

ಅಧಿಕಾರಿಗಳಿಗೆ ನಿಗಮದ ಅಧ್ಯಕ್ಷೆ ಸೂಚನೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜಿಲ್ಲೆಯ ಅಲೆಮಾರಿ ಸಮುದಾಯಗಳಿಗೆ ಸೂರು ಕಲ್ಪಿಸುವುದನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಜಾರಿಯಾದ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಹಾಗೂ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿರುವ ವಿವಿಧ ಅಲೆಮಾರಿ ಸಮುದಾಯದವರ ಜಾತಿ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆ, ಆಯಾ ತಾಲೂಕು ತಹಶೀಲ್ದಾರರು ಮತ್ತು ಇತರೆ ಇಲಾಖೆಗಳ ಜಂಟಿ ಸಹಯೋಗದಲ್ಲಿ ತಾಲೂಕುವಾರು ಜಂಟಿ ಸರ್ವೇ ಕಾರ್ಯ ನಡೆಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ದೊರಕಿಸಿಕೊಡಲು ಜಾಗ ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಯವರಿಂದ ಸೂಕ್ತ ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡುವ ಕುರಿತು 2016ರಲ್ಲಿ ಸರ್ಕಾರದ ಆದೇಶವಿದೆ. ಈ ಆದೇಶದನ್ವಯ ಪೂರಕ ಕ್ರಮಗಳಿಗೆ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.

ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತನ್ನಿ:

ಅಧಿಕಾರಿಗಳು ಮತ್ತು ನಾಮ ನಿರ್ದೇಶಿತ ಸದಸ್ಯರ ಮಧ್ಯ ಸಮನ್ವಯತೆ ಇರಬೇಕು. ಈ ಸಮುದಾಯಗಳಿಗೆ ಸರ್ಕಾರದ ಯೋಜನೆಗಳಡಿ ಸೌಲಭ್ಯಗಳು ದೊರಕಿಸಬೇಕು ಎಂಬ ಉದ್ದೇಶದೊಂದಿಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ ಇದ್ದು, ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಸಭೆ ನಡೆಸಿ ಯೋಜನೆಗಳ ಲಾಭ ದೊರಕಿಸಲು ಮತ್ತು ಅರ್ಹ ಫಲಾನುಭವಿಗಳ ಆಯ್ಕೆಗೆ ನೆರವಾಗುವಂತೆ ಸಲಹೆ ನೀಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಜನಾಂಗದ ಮಕ್ಕಳು ಮುಖ್ಯ ವಾಹಿನಿಗೆ ಬರಬೇಕು. ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ. ಹಾಗಾಗಿ ಅವರಿರುವ ಜಾಗಗಳಲ್ಲಿ ಶಿಕ್ಷಣ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.

ಅಲೆಮಾರಿ ಸಮುದಾಯದವರಿಗೆ ಭೂಮಿ, ನೆಲೆ, ಸೂರು ಮುಖ್ಯವಾಗಿ ಶಿಕ್ಷಣದಿಂದ ವಂಚಿತರಾಗಿ ಮೌಢ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಶಿಕ್ಷಣದ ಅರಿವು ಮೂಡಿಸುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಲು ಅಧಿಕಾರಿಗಳು ಕಾಳಜಿ ವಹಿಸಬೇಕು. ಬಾಲ್ಯ ವಿವಾಹ ಪದ್ಧತಿಯಿಂದಾಗುವ ದುಷ್ಪರಿಣಾಮ ಕುರಿತು ತಿಳಿಸಬೇಕು. ಅಲೆಮಾರಿ ಸಮುದಾಯದವರಿಗಾಗಿಯೇ ಇರುವ ಸರ್ಕಾರಿ ಸೌಲಭ್ಯಗಳ ಕುರಿತು ತಿಳಿಸಬೇಕು ಎಂದರು.ಅಹವಾಲು ಸ್ವೀಕಾರ:

ಬಳಿಕ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದ ಸಂಘ ಸಂಸ್ಥೆಗಳ ಮತ್ತು ಅಲೆಮಾರಿ ಸಮುದಾಯದ ಜನರಿಂದ ಕುಂದುಕೊರತೆಗಳ ಅಹವಾಲು ಸ್ವೀಕಾರ ಮಾಡಿದರು.

ಮೂಲ ಜನಾಂಗದವರಿಗೆ ವಸತಿ ರಹಿತರಿಗೆ ವಸತಿ ಸೌಲಭ್ಯ, ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ, ಸಮುದಾಯ ಭವನ, ಸ್ಮಶಾನಕ್ಕೆ ದಾರಿ ಕಲ್ಪಿಸುವ ಕುರಿತು, ಭೂಮಿ ಹಂಚಿಕೆ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಕೆಯಾದವು. ಇದೇ ಸಂದರ್ಭ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ., ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ.ಎಸ್. ಆನಂದ್ ಕುಮಾರ್ ಏಕಲವ್ಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ ಸೇರಿದಂತೆ ಜಿಲ್ಲಾ ಅನುಷ್ಠಾನ ಸಮಿತಿಯ ಸದಸ್ಯರು, ವಿವಿಧ ಅಲೆಮಾರಿ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.