ಸೂರಿಲ್ಲದವರಿಗೆ ಸೂರು ನೀಡುವೆ, ಸಹಕಾರ ನೀಡಿ

| Published : Jan 26 2025, 01:33 AM IST

ಸಾರಾಂಶ

ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸಲಾಗುತ್ತಿದೆ.ತಾಲೂಕು ಕೇಂದ್ರವಾಗಿ ಕೆಲ ವರ್ಷಗಳು ಗತಿಸಿದರೂ ಸಹ ಸಂಬಂಧಿಸಿದ ಕಚೇರಿಗಳು ನಿರ್ಮಾಣಕ್ಕಾಗಿ ₹೨೦ ಕೋಟಿ ಅನುದಾನದಲ್ಲಿ ₹ ೮ ಕೋಟಿ ಟೆಂಡರ್ ಕರೆಯಲಾಗಿದೆ

ಗಜೇಂದ್ರಗಡ: ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಸ್ಥರಿಗೆ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವುದರ ಜತೆಗೆ ಸೂರಿಲ್ಲದ ಪ್ರತಿಯೊಬ್ಬರಿಗೂ ಮನೆ ನೀಡುವ ನೀಲನಕ್ಷೆ ಹಾಕಿಕೊಂಡಿದ್ದೇನೆ ಎಂದು ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.

ಪಟ್ಟಣದ ಜಿ.ಕೆ.ಬಂಡಿ ಗಾರ್ಡನ್‌ನಲ್ಲಿ ಶನಿವಾರ ನಡೆದ ಪುರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ತಳ್ಳುವ ಗಾಡಿ ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸಲಾಗುತ್ತಿದೆ.ತಾಲೂಕು ಕೇಂದ್ರವಾಗಿ ಕೆಲ ವರ್ಷಗಳು ಗತಿಸಿದರೂ ಸಹ ಸಂಬಂಧಿಸಿದ ಕಚೇರಿಗಳು ನಿರ್ಮಾಣಕ್ಕಾಗಿ ₹೨೦ ಕೋಟಿ ಅನುದಾನದಲ್ಲಿ ₹ ೮ ಕೋಟಿ ಟೆಂಡರ್ ಕರೆಯಲಾಗಿದೆ, ಪೂರ್ಣ ಪ್ರಮಾಣದ ನ್ಯಾಯಾಲಯ ಆರಂಭಕ್ಕೆ, ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಅಲ್ಲದೆ ಬೀದಿ ಬದಿ ವ್ಯಾಪಾರಸ್ಥರ ಬಹುವರ್ಷದ ಬೇಡಿಕೆಯಾದ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ನೀಲನಕ್ಷೆ ಹಾಕಿಕೊಳ್ಳಲಾಗಿದ್ದು, ೨೫-೩೦ ಎಕರೆ ಜಾಗ ಖರೀದಿಸಿ ಸೂರಿಲ್ಲದವರಿಗೆ ಮನೆ ನೀಡಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಹಾಗೂ ಇನ್ನುಳಿದ ಸದಸ್ಯರ ಸಹಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದು, ೫೦ ತಳ್ಳುವ ಗಾಡಿಗಳನ್ನು ಸಾಂಕೇತಿಕವಾಗಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಹ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಡೇ ನಲ್ಮ್ ಅಡಿಯಲ್ಲಿ ವಿವಿಧ ಸ್ವ ಸಹಾಯ ಸಂಘಗಳಿಗೆ ಲಕ್ಷಾಂತರ ಸಾಲ ನೀಡಲಾಗಿದೆ. ಬೀದಿ ಬದಿ ವ್ಯಾಪಾರಸ್ಥರು ಸಹ ಸ್ವ ಸಹಾಯ ಸಂಘ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ ಎಂದರು.

ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ೫೦ ತಳ್ಳುವ ಗಾಡಿ ಮೊದಲ ಹಂತದಲ್ಲಿ ನೀಡಲಾಗಿದ್ದು, ಶೌಚಾಲಯ ನಿರ್ಮಾಣ, ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೀದಿ ಬದಿ ವ್ಯಾಪಾರಸ್ಥರಿಗೆ ಸರ್ಕಾರದ ಯೋಜನೆ ತಲುಪಿಸುವ ಕಾರ್ಯ ತಾಲೂಕಾಡಳಿತ ಹಾಗೂ ಪುರಸಭೆ ಶಿಸ್ತು ಬದ್ಧವಾಗಿ ಮಾಡುತ್ತಿದೆ ಎಂದರು.

ಸಿದ್ದಣ್ಣ ಬಂಡಿ ಪಟ್ಟಣದ ಸಾರ್ವಜನಿಕರು ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಬೀದಿ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿಗಳನ್ನು ಶಾಸಕರು ನೀಡಿದ್ದಾರೆ. ಹೀಗಾಗಿ ಅನಗತ್ಯ ಆರೋಪಗಳಿಗೆ ಕಿವಿಗೊಡಬೇಡಿ. ಅಭಿವೃದ್ಧಿ ಆಗಬೇಕಾದರೆ ಕೆಲ ಬದಲಾವಣೆಗಳು ಅನಿವಾರ್ಯ ಎಂದರು. ಅಶೋಕ ಬಾಗಮಾರ ಮಾತನಾಡಿದರು.

ಈ ವೇಳೆ ಸ್ವಸಹಾಯ ಸಂಘಗಳಿಗೆ ಸಹಾಯ ಧನದ ಚೆಕ್, ತಳ್ಳುವ ಗಾಡಿ ಆದೇಶ ಪ್ರಮಾಣ ಪತ್ರ ಹಾಗೂ ಬೀದಿ ಬದಿ ವ್ಯಾಪರಸ್ಥರಿಗೆ ಗುರುತಿನ ಚೀಟಿ ವಿತರಿಸಿದರು.

ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸ್ಥಾಯಿ ಸಮಿತಿಯ ಚೇರಮನ್ ಮುದಿಯಪ್ಪ ಮುಧೋಳ, ಸದಸ್ಯರಾದ ಮುರ್ತುಜಾ ಡಾಲಾಯತ, ಶಿವರಾಜ ಘೋರ್ಪಡೆ, ವೆಂಕಟೇಶ ಮುದಗಲ್, ಬೀದಿ ಬದಿ ವ್ಯಾಪಾರಿಗಳ ಸಂಘದ ಭಾಷೇಸಾಬ್‌ ಕರ್ನಾಚಿ, ಸಿದ್ದಣ್ಣ ಬಂಡಿ, ವೀರಣ್ಣ ಶೆಟ್ಟರ್‌, ರಫೀಕ್ ತೋರಗಲ್, ಉಮೇಶ ರಾಠೋಡ, ಬಸವರಾಜ ಹೂಗಾರ, ಸಿದ್ದಣ್ಣ ಚೋಳಿನ, ದುರಗಪ್ಪ ಮುಧೋಳ, ಶ್ರೀಧರ ಬಿದರಳ್ಳಿ, ಶಶಿಧರ ಹೂಗಾರ, ಶರಣಪ್ಪ ಚಳಗೇರಿ, ಸುರೇಶ ಚವಡಿ ಸೇರಿದಂತೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಇದ್ದರು.