ಜನಸಂಪರ್ಕ ಸಭೆಯಲ್ಲಿ ನೀಡುವ ಪ್ರತಿಯೊಂದು ಅರ್ಜಿಗೂ ಮಾನ್ಯತೆ ಇದೆ. ಅರ್ಜಿ ಮೂಲಕ ನಮ್ಮ ಗಮನಕ್ಕೆ ತಂದಿರುವ ಪ್ರತಿಯೊಂದು ಸಮಸ್ಯೆಗೂ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಬೇಕು. ನ್ಯಾಯಾಲಯದಲ್ಲಿ ಇರುವ ಪ್ರಕರಣ ಹೊರತುಪಡಿಸಿ ಇತರೆ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಸಾಗರ
ಜನಸಂಪರ್ಕ ಸಭೆಯಲ್ಲಿ ನೀಡುವ ಪ್ರತಿಯೊಂದು ಅರ್ಜಿಗೂ ಮಾನ್ಯತೆ ಇದೆ. ಅರ್ಜಿ ಮೂಲಕ ನಮ್ಮ ಗಮನಕ್ಕೆ ತಂದಿರುವ ಪ್ರತಿಯೊಂದು ಸಮಸ್ಯೆಗೂ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸಬೇಕು. ನ್ಯಾಯಾಲಯದಲ್ಲಿ ಇರುವ ಪ್ರಕರಣ ಹೊರತುಪಡಿಸಿ ಇತರೆ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ನಗರಸಭೆ ಆವರಣದಲ್ಲಿ ಗುರುವಾರ ನಗರಸಭೆ ವ್ಯಾಪ್ತಿಯ ಜನರಿಗಾಗಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ವಿಳಂಬವಿಲ್ಲದೆ ಜನರ ಕೆಲಸ ಮಾಡಿಕೊಡಬೇಕಾದ್ದು ಅಧಿಕಾರಿಗಳ ಕರ್ತವ್ಯ. ಒಂದು ಕೆಲಸಕ್ಕಾಗಿ ಪದೆ ಪದೇ ಜನರನ್ನು ಅಲೆಸಬಾರದು ಎಂದರು.
ನಗರಸಭೆಯಲ್ಲಿ ಚುನಾಯಿತ ಸದಸ್ಯರು ಇಲ್ಲ ಎಂದು ಅಭಿವೃದ್ಧಿ ಮತ್ತು ಜನರಿಗೆ ಸಿಗುತ್ತಿರುವ ಮೂಲಭೂತ ಸೌಲಭ್ಯಕ್ಕೆ ವಂಚನೆಯಾಗಬಾರದು. ಜನಸಂಪರ್ಕ ಸಭೆಯಲ್ಲಿ ನೀಡಿರುವ ಪ್ರತಿಯೊಂದು ಅರ್ಜಿಯನ್ನು ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಾತ್ರೆ ಹಿನ್ನೆಲೆಯಲ್ಲಿ ಎರಡು ತಿಂಗಳು ಹೆಚ್ಚಿನ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಬೀದಿದೀಪ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಗಮನ ಹರಿಸಲಾಗುತ್ತದೆ. ವಿಧಾನಸಭಾ ಅಧಿವೇಶನ ನಂತರ ಬೆಳಿಗ್ಗೆ ೬ ಗಂಟೆಯಿಂದ ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಿಗೂ ಭೇಟಿ ನೀಡಿ ಕುಂದು ಕೊರತೆಯನ್ನು ಗಮನಿಸುತ್ತೇನೆ ಎಂದು ಹೇಳಿದರು.ಪ್ರೊಬೇಷನರಿ ಉಪವಿಭಾಗಾಧಿಕಾರಿ ನಾಗೇಂದ್ರ, ಉಪವಿಭಾಗಾಧಿಕಾರಿ ವಿರೇಶ ಕುಮಾರ್, ತಹಸೀಲ್ದಾರ್ ರಶ್ಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ಯೋಜನಾ ನಿರ್ದೇಶಕ ರಂಗಸ್ವಾಮಿ, ವಿವಿಧ ಸಮಿತಿ ನಾಮನಿರ್ದೇಶಕ ಸದಸ್ಯರಾದ ಮಧುಮಾಲತಿ, ಸೋಮಶೇಖರ ಲ್ಯಾವಿಗೆರೆ, ಮಕ್ಬೂಲ್ ಅಹ್ಮದ್, ಸುರೇಶಬಾಬು, ಮಂಡಗಳಲೆ ಗಣಪತಿ ಇನ್ನಿತರರು ಹಾಜರಿದ್ದರು.
ಸಾರ್ವಜನಿಕರ ದೂರುಹಾನಂಬಿ ಹೊಳೆ ಮೇಲ್ಭಾಗದ ನಾಗರಿಕರು ತಮ್ಮ ಭಾಗದಲ್ಲಿ ವಿಪರೀತ ಗಾಂಜಾ ಸೇವನೆ ಮಾಡುತ್ತಿದ್ದು, ಅಪರಾಧ ಕೃತ್ಯಗಳು ನಡೆಯುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರೆ, ನಿವೃತ್ತ ನೌಕರರ ಸಂಘದಿಂದ ನಿವೇಶನಕ್ಕಾಗಿ ಅರ್ಜಿ ನೀಡಿ ದಶಕ ಕಳೆದರೂ ಈತನಕ ಮಂಜೂರಾಗಿಲ್ಲ ಎಂದು ದೂರಿದರು. ಸವಿತಾ ಸಮಾಜ ಮತ್ತು ದೈವಜ್ಞ ಸಮಾಜದವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಈತನಕ ನೀಡಿಲ್ಲ ಎಂದು ಆರೋಪಿಸಿದರು. ಸಾಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಸಾಗರ ಜಿಲ್ಲೆ ಘೋಷಣೆ ಮಾಡಲು ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದೊಯ್ಯುವಂತೆ ಮನವಿ ಸಲ್ಲಿಸಿದರು. ೩೧ನೇ ವಾರ್ಡ್‌ಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಜಮೀಲ್ ಸಾಗರ್ ಒತ್ತಾಯಿಸಿದರು.
ಬೋರ್‌ಗೆ ವಿದ್ಯುತ್ ನಿರ್ಲಕ್ಷ್ಯ: ಶಾಸಕ ಕಿಡಿಕೊರೆದಿರುವ ಕೊಳವೆಬಾವಿಗೆ ಊದುಬತ್ತಿ ಹಚ್ಚಿ ಪೂಜೆ ಮಾಡಿ. ಕೊಳವೆಬಾವಿ ಕೊರೆದು ಎರಡು ವರ್ಷವಾದರೂ ಈತನಕ ಸಂಪರ್ಕ ಕೊಟ್ಟಿಲ್ಲವೆಂದರೆ ಅದನ್ನು ಇರಿಸಿಕೊಂಡು ಏನು ಮಾಡುತ್ತೀರಿ. ಇನ್ನು ಎರಡು ಮೂರು ದಿನಗಳಲ್ಲಿ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ನೀಡಿ ಜನರಿಗೆ ನೀರು ಪೂರೈಕೆ ಮಾಡಿ ಎಂದು ಶಾಸಕರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಬಸವೇಶ್ವರ ನಗರದ ನಾಗರಿಕರು ನೀಡಿದ ಅಹವಾಲು ಸ್ವೀಕರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಮತ್ತೆ ಆ ಭಾಗದ ಜನರು ನನ್ನ ಬಳಿ ಬರಬಾರದು. ಮೆಸ್ಕಾಂ ಮತ್ತು ನಗರಸಭೆ ಜಂಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಒಂದೊಮ್ಮೆ ಸಮಸ್ಯೆ ಬಗೆಹರಿಯದೆ ಹೋದರೆ ನಾಗರಿಕರು ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದರು. .