ಸಾರಾಂಶ
ಪಶುಪಾಲನಾ ಇಲಾಖೆಯ ವಿವಿಧ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಕಾರವಾರಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಪಂ, ನಗರಾಭಿವೃಧ್ದಿ ಕೋಶ ಮತ್ತು ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಶುಪಾಲನಾ ಇಲಾಖೆಯ ವಿವಿಧ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ ಮಿಷನ್ ರೇಬಿಸ್ ಕಾರ್ಯಕ್ರಮದಡಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಕೈಗೊಂಡಿದ್ದು, ಶಿರಸಿಯಲ್ಲಿ 1580 ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದ್ದು, ಕಾರವಾರದಲ್ಲಿಯೂ ಈ ಕಾರ್ಯ ಪ್ರಗತಿಯಲ್ಲಿದೆ. ಇದೇ ರೀತಿಯಲ್ಲಿ ಜಿಲ್ಲೆಯ ಉಳಿದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಶೇ.100ರಷ್ಟು ಅನುಷ್ಠಾನಗೊಳಿಸಬೇಕು ಎಂದ ಜಿಲ್ಲಾಧಿಕಾರಿ, ಗ್ರಾಪಂ ಮಟ್ಟದಲ್ಲಿಯೂ ಸಹ ಈ ಕಾರ್ಯಕ್ರಮ ಆಯೋಜಿಸುವಂತೆ ಜಿಪಂ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಬೀದಿನಾಯಿಗಳ ಕಡಿತಕ್ಕೆ ಸೂಕ್ತ ಚಿಕಿತ್ಸೆ ನೀಡಲು ಔಷಧಗಳ ಕೊರತೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಔಷಧ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದರು.ಪಶು ಸಂಜೀವಿನಿ ಆ್ಯಂಬುಲೈನ್ಸ್‌ಗಳ ಮೂಲಕ ಪಶುಗಳಿಗೆ ತ್ವರಿತವಾಗಿ ಅಗತ್ಯವಿರುವ ಚಿಕಿತ್ಸೆ ನೀಡುವಂತೆ ಸೂಚಿಸಿದ ಅವರು, ಪಶು ಸಂಜೀವಿನಿ ಆ್ಯಂಬುಲೈನ್ಸ್‌ನ ಉಚಿತ ದೂರವಾಣಿ ಸಂಖ್ಯೆ 1962ಗೆ ರೈತರು ಮತ್ತು ಜಾನುವಾರು ಮಾಲಕರು ಕರೆ ಮಾಡಿದಾಗ ಕೆಲವೊಮ್ಮೆ ಕಾಲ್ ಡ್ರಾಪ್ ಆಗುತ್ತಿರುವ ಕುರಿತು ದೂರುತಿದ್ದು, ಕರೆ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಕಂಡುಬರದಂತೆ ಮತ್ತು ಕರೆಯಿಂದ ಸ್ವೀಕರಿಸುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಬಗ್ಗೆ ಸೇವಾ ಪೂರೈಕೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ಪಶು ಸಂಜೀವಿನಿ ಆ್ಯಂಬುಲೈನ್ಸ್‌ಗಳ ಮೂಲಕ ಸ್ವೀಕರಿಸಿರುವ 7493 ಕರೆಗಳಿಗೆ ಸ್ಪಂದಿಸಿ, ಪಶುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಆ್ಯಂಬುಲೈನ್ಸ್ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲೆಯಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಯ ಯೋಜಕರಿಗೆ ಸೂಚನೆ ನೀಡಲಾಗುವುದು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಮೋಹನ್ ಕುಮಾರ್ ತಿಳಿಸಿದರು.ಕಾಲುಬಾಯಿ ಜ್ವರದ ವಿರುದ್ಧದ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಹಮ್ಮಿಕೊಳ್ಳುವಂತೆ ಮತ್ತು ಇದೇ ಅವಧಿಯಲ್ಲಿ ಚರ್ಮಗಂಟು ರೋಗದ ವಿರುದ್ಧ ಲಸಿಕೆಯನ್ನು ಕೂಡಾ ಒಟ್ಟಿಗೆ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ನಿರ್ಮಾಣವಾಗಿರುವ ಗೋಶಾಲೆಗಳ ನಿರ್ವಹಣೆ ಮತ್ತು ಬಿಡಾಡಿ ದನಗಳ ನಿಯಂತ್ರಣ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ಪೌರಾಯುಕ್ತ ಜಗದೀಶ್ ಹುಲಗೆಜ್ಜಿ ಮತ್ತಿತರರು ಇದ್ದರು.