ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಲೆಮಾರಿ ಜನಾಂಗದವರು ವಸತಿ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಬೇಕಾಗಿರುವ ಜಾತಿ ಪ್ರಮಾಣ ಪತ್ರ, ಇತರೆ ಪೂರಕ ದಾಖಲೆಗಳನ್ನು ಸರಳೀಕರಿಸಿ ನೀಡಲು ಎಲ್ಲ ತಾಲೂಕು ತಹಸೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಜಾರಿಯಾದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಸಮಾಲೋಚನಾ ಸಭೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ, ಈಗಾಗಲೇ 21 ಜಿಲ್ಲೆಗಳನ್ನು ತಾಲೂಕುವಾರು ಪ್ರವಾಸ ಕೈಗೊಂಡು, ಅಲೆಮಾರಿ ಜನಾಂಗದ ಸ್ಥಿತಿಗತಿಗಳನ್ನು ಪರಿಶೀಲಿಸುತ್ತಿದ್ದೇನೆ. ಟೆಂಟ್, ಜೋಪಡಿ ಮತ್ತು ಅವರು ವಾಸ ಮಾಡುತ್ತಿರುವ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ, ವಸತಿ, ಶಿಕ್ಷಣ, ಸರ್ಕಾರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದರು.

ರಾಜ್ಯದಲ್ಲಿ 11 ಲಕ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯವಿದ್ದು, ಜಿಲ್ಲೆಯಲ್ಲಿ 20,084 ಪ.ಜಾ ಮತ್ತು 2728 ಪ.ಪಂ. ಜನಸಂಖ್ಯೆ ಇದೆ. 2026ರ ಬಜೆಟ್‌ನಲ್ಲಿ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ ರು.100 ಕೋಟಿ ವಿಶೇಷ ಅನುದಾನ ಹಾಗೂ ಈ ಜನಾಂಗದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು 4 ವಸತಿ ನಿಲಯಗಳನ್ನು ಘೋಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಶಿವಮೊಗ್ಗ ತಾಲೂಕಿನ ಗೋಂದಿ ಚಟ್ನಹಳ್ಳಿ, ಕಲ್ಲಾಪುರ, ಮಲ್ಲಿಗೇನಹಳ್ಳಿ, ನಗರದ ಎಂಆರ್‌ಎಸ್ ಭಾಗದಲ್ಲಿ ವಾಸವಾಗಿರುವ ಸುಡುಗಾಡು ಸಿದ್ದ, ಹಂದಿಜೋಗಿ, ಗೋಸಂಗಿ, ಶಿಳ್ಳೇಕ್ಯಾತ, ಕೊರಚ ಇತರೆ ಅಲೆಮಾರಿ ಜನಾಂಗದವರು ವಾಸವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅವರು ಶಾಶ್ವತವಾಗಿ ನೆಲೆ ನಿಲ್ಲಲು ವಸತಿ, ನಿವೇಶನ ಕೊಡಿಸುವ ಬಗ್ಗೆ, ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.


ತೀರ್ಥಹಳ್ಳಿಯಲ್ಲಿ ದೊಂಬರು, ಸುಡುಗಾಡು ಸಿದ್ದರು ಹೊಳೆದಂಡೆಯಲ್ಲಿ ನೆಲೆಸುತ್ತಿದ್ದು, ರಾಜೀವ್ ಗಾಂಧಿ ವಸತಿ ನಿಗಮದಿಂದ ಅವರಿಗೆ ವಸತಿ ಮಂಜೂರು ಮಾಡಲಾಗಿದೆ. ಶೀಘ್ರದಲ್ಲೇ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಭದ್ರಾವತಿಯಲ್ಲಿ ಅತಿವೃಷ್ಟಿಯಿಂದ ಶಿಳ್ಳೇಕ್ಯಾತರು ವಾಸವಾಗಿದ್ದ ಟೆಂಟ್ ಬಿದ್ದು ಹೋಗಿ, ಗಂಗಮ್ಮ ಮತ್ತು ಹನುಮಂತಪ್ಪನವರ ಮಗಳು ಮರಣ ಹೊಂದಿದ್ದು, ಇನ್ನೂ ಪರಿಹಾರ ದೊರೆತಿಲ್ಲ. ಪರಿಹಾರ ನೀಡಲು ಜಿಲ್ಲಾಧಿಕಾರಿ ಶೀಘ್ರವೇ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ ಎಂದರು.

ದಾಖಲೆ ಒದಗಿಸಲು ತಹಸೀಲ್ದಾರರಿಗೆ ಸೂಚನೆ: ಅಲೆಮಾರಿ ಜನಾಂಗಗಳಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕಾದರೆ ಮುಖ್ಯವಾಗಿ ದಾಖಲೆಗಳು ಬೇಕು. ಆಧಾರ್, ಜಾತಿ ಪ್ರಮಾಣ ಪತ್ರಗಳು ಬಹು ಮುಖ್ಯವಾಗಿ ಬೇಕಾಗಿದ್ದು, ಎಲ್ಲ ತಾಲೂಕುಗಳ ತಹಸೀಲ್ದಾರರಿಗೆ ವಿಶೇಷ ಶಿಬಿರ ಮಾಡಿ ಜಾತಿ ಪ್ರಮಾಣ ಪತ್ರ ನೀಡುವಂತೆ ಹಾಗೂ ಸ್ಥಾನಿಕ ಚೌಕಾಸಿ ಮಾಡಿ ಜಾತಿ ಪ್ರಮಾಣ ಪತ್ರ ಒದಗಿಸಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ವಸತಿರಹಿತ ಅಲೆಮಾರಿಗಳಿಗೆ 3200 ಮನೆ ನೀಡುವ ಅವಕಾಶ ನಿಗಮಕ್ಕಿದ್ದು, ಜಿಲ್ಲೆಗಳಿಂದ ಬೇಡಿಕೆ ಬರಬೇಕಿದೆ. ಸಮರ್ಪಕ ದಾಖಲಾತಿಗಳಿಲ್ಲದ ಕಾರಣ ಬೇಡಿಕೆ ಕಡಿಮೆ ಇದ್ದು, ವಸತಿ ಸೌಲಭ್ಯ ನೀಡಲಾಗುತ್ತಿಲ್ಲ. ಆದ್ದರಿಂದ ಎಲ್ಲ ತಾಲೂಕು ಅಧಿಕಾರಿಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಿ ಇವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ನಿವೇಶನ ರಹಿತರ ಪಟ್ಟಿ ನೀಡಲು ಸೂಚನೆ: ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ನೀಡುವ ಸಲುವಾಗಿ ಇನ್ನು ಒಂದು ವಾರದೊಳಗೆ ವಸತಿರಹಿತರ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಿಗಮದಿಂದ ನೀಡಲಾಗುವ ಸೌಲಭ್ಯಗಳ ಕುರಿತು ಅಲೆಮಾರಿ ಜನಾಂಗದವರಿಗೆ ಅಷ್ಟಾಗಿ ಜ್ಞಾನ ಇಲ್ಲವಾಗಿದ್ದು, ಕಾಲ ಕಾಲಕ್ಕೆ ಇವರು ಇರುವ ಸ್ಥಳಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲು ನಿಗಮದಿಂದ ವಿಶೇಷ ಅನುದಾನ ನೀಡಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲೇಶಪ್ಪ ಡಿ, ನಿಗಮದ ಸದಸ್ಯರು, ನಿಗದಮ ಕೋ ಆರ್ಡಿನೇಟರ್ ಆನಂದಕುಮಾರ್ ಹಾಜರಿದ್ದರು.

-----

ಶಿಕಾರಿಪುರ ತಾಲೂಕಿನಲ್ಲಿ ಶಿಳ್ಳೇಕ್ಯಾತರು, ಹಂದಿಗೊಲ್ಲರು, ದೊಂಬರ ಜನಾಂಗದವರ ನಿವೇಶನಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿವೆ. ಸಾಗರ ಮತ್ತು ಸೊರಬ ತಾಲೂಕಿನಲ್ಲಿ ಕೊರಚ, ಶಿಳ್ಳೇಕ್ಯಾತರ ಜಾತಿಪ್ರಮಾಣ ಪತ್ರ ಮತ್ತು ಆಧಾರ್ ಪಡೆಯುವಲ್ಲಿ ಸಮಸ್ಯೆ ಇದ್ದು, ತಹಸೀಲ್ದಾರರು ಈ ದಾಖಲಾತಿ ನೀಡುವಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆ. ಶಿವಮೊಗ್ಗದಲ್ಲಿಯೂ ಜಾತಿ ಪ್ರಮಾಣ ಪತ್ರ ಒದಗಿಸುವ ಕೆಲಸ ಪ್ರಗತಿಯಲ್ಲಿದೆ. ಜಿ.ಪಲ್ಲವಿ ಅಧ್ಯಕ್ಷೆ, ಪ.ಜಾ ಮತ್ತು ಪಪಂ. ಅಲೆಮಾರಿ ಅಭಿವೃದ್ಧಿ ನಿಗಮ