ಪೌರಕಾರ್ಮಿಕರಿಗೆ ಮನೆಯನ್ನು ಒದಗಿಸುವುದು ಎಲ್ಲಾ ನಗರಸ್ಥಳಿಯ ಸಂಸ್ಥೆಗಳ ಪ್ರಮುಖ ಕರ್ತವ್ಯವಾಗಿದ್ದು, ಜಿಲ್ಲೆಯಲ್ಲಿ ಗೃಹಭಾಗ್ಯ ಯೋಜನೆಯಡಿಯಲ್ಲಿ ಪೌರಕಾರ್ಮಿಕರಿಗೆ ಈಗಾಗಲೇ ನಿರ್ಮಾಣಗೊಂಡಿರುವ ಮನೆಗಳನ್ನು ತಕ್ಷಣವೇ ಹಸ್ತಾಂತರಿಸುವಂತೆ ಮತ್ತು ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಶೀಘ್ರದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಹಂಚಿಕೆ ಮಾಡಬೇಕು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಕಾರವಾರಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಕಾರ್ಮಿಕರು/ಪೌರಕಾರ್ಮಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮ ಹಾಗೂ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪೌರಕಾರ್ಮಿಕರಿಗೆ ಮನೆಯನ್ನು ಒದಗಿಸುವುದು ಎಲ್ಲಾ ನಗರಸ್ಥಳಿಯ ಸಂಸ್ಥೆಗಳ ಪ್ರಮುಖ ಕರ್ತವ್ಯವಾಗಿದ್ದು, ಜಿಲ್ಲೆಯಲ್ಲಿ ಗೃಹಭಾಗ್ಯ ಯೋಜನೆಯಡಿಯಲ್ಲಿ ಪೌರಕಾರ್ಮಿಕರಿಗೆ ಈಗಾಗಲೇ ನಿರ್ಮಾಣಗೊಂಡಿರುವ ಮನೆಗಳನ್ನು ತಕ್ಷಣವೇ ಹಸ್ತಾಂತರಿಸುವಂತೆ ಮತ್ತು ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಶೀಘ್ರದಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಹಂಚಿಕೆ ಮಾಡಬೇಕು. ಮನೆಗಳ ನಿರ್ಮಾಣದಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು ಇದರಲ್ಲಿ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡುವಂತೆ ಹಾಗೂ ಈಗಾಗಲೇ ನಿರ್ಮಿಸಿರುವ ಮನೆಗಳ ಸುರಕ್ಷತೆ ಮತ್ತು ಗುಣಮಟ್ಟ ಕುರಿತಂತೆ ಪ್ರತ್ಯೇಕ ತನಿಖೆ ನಡೆಸುವಂತೆ ತಿಳಿಸಿದರು.
ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ಬೆಳಗಿನ ಉಪಹಾರ ನೀಡುವ ಯೋಜನೆಯಲ್ಲಿ ಪೌರಕಾರ್ಮಿಕರಿಗೆ 2 ತಿಂಗಳಿಂದ ಉಪಾಹಾರ ನೀಡದ ಬಗ್ಗೆ ಪರಿಶೀಲಿಸಿದ ಅವರು, ಗುತ್ತಿಗೆದಾರರ ಸಮಸ್ಯೆಯಿಂದ ಕಾರ್ಮಿಕರಿಗೆ ತೊಂದರೆಯಾಗಬಾರದು, ಕೂಡಲೇ ಟೆಂಡರ್‌ದಾರರನ್ನು ಬದಲಾಯಿಸಿ ನಾಳೆಯಿಂದಲೇ ಕಾರ್ಮಿಕರಿಗೆ ಉಪಹಾರ ಒದಗಿಸಬೇಕು ಮತ್ತು ಎರಡು ತಿಂಗಳ ಭತ್ಯೆಯನ್ನು ನಗದಾಗಿ ಕಾರ್ಮಿಕರಿಗೆ ವಿತರಿಸುವಂತೆ ನಿರ್ದೇಶನ ನೀಡಿದರು.ಉತ್ತರ ಕನ್ನಡ ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮತ್ತು ವಿವಿಧ ನಿಗಮಗಳ ಮೂಲಕ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸುವಂತೆ ಮತ್ತು ಜಿಲ್ಲೆಗೆ ನಿಗಧಿಪಡಿಸಿರುವ ಗುರಿಯನ್ನು ಮತ್ತು ಅನುದಾನವನ್ನು ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಸರ್ಕಾರದ ಯೋಜನೆಗಳ ಹೆಚ್ಚಿನ ನೆರವು ದೊರೆಯುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು, ನ. 7ರಂದು ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತಪ್ಪದೇ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪದ್ದತಿ ಇಲ್ಲ. ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳನ್ನು ಬಳಸಲಾಗುತ್ತಿದೆ. ನಿಯಮಿತವಾಗಿ ಸಫಾಯಿ ಕರ್ಮಚಾರಿಗಳ ಕುರಿತು ಸಭೆ ನಡೆಸಲಾಗುತ್ತಿದ್ದು, ಅವರ ಕುಂದುಕೊರತೆಗಳನ್ನು ಬಗೆಹರಿಸಲಾಗುತ್ತಿದೆ ಎಂದರು.ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಆಯೋಗದ ಸದಸ್ಯ ಶಂಕರ್, ಸಂಶೋಧನಾ ಅಧಿಕಾರಿ ಮಹಾದೇವ ಸ್ವಾಮಿ, ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ (ಪ್ರಭಾರ) ಸಾಜಿದ್ ಮುಲ್ಲಾ, ಉಪವಿಭಾಗಾಧಿಕಾರಿಗಳಾದ ಚಂದ್ರಶೇಖರ್, ಮಹೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ , ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಇದ್ದರು.