ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿದೇಶದ ಬೆನ್ನೆಲುಬಾಗಿರುವ ರೈತರ ಜೀವನ, ಕೃಷಿ ಮೇಲೆ ಅವಲಂಬಿತವಾಗಿದ್ದು, ಅವರಿಗೆ ಮೋಸವಾಗದಂತೆ ಸಕಾಲಕ್ಕೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ಪೂರೈಸಲು ಎಲ್ಲಾ ಸಿದ್ಧತೆ ಮಾಡಿಕೊಂಡು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಬೀಜ ರಸಗೊಬ್ಬರಗಳ ಪೂರೈಕೆದಾರರ ಪ್ರತಿನಿಧಿಗಳೊಂದಿಗೆ ನಡೆದ ಜಿಲ್ಲಾಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.ಪ್ರಸ್ತುತ ಮುಂಗಾರು ಪೂರ್ವ ಮಳೆ ಶುರುವಾಗಿದ್ದು, ರೈತರು ಭೂಮಿ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಪಾರದರ್ಶಕವಾಗಿ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ಷೇತ್ರದಲ್ಲಿ ಹತ್ತಿ ಬಿತ್ತನೆ ಆಗುತ್ತಿದ್ದು, ಮಾರುಕಟ್ಟೆಯಲ್ಲಿ ಹತ್ತಿ ಬಿತ್ತನೆ ಬೀಜಗಳ ಕೃತಕ ಅಭಾವ ಸೃಷ್ಟಿಸುವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹತ್ತಿ ಬೀಜಗಳ ಗುಣಮಟ್ಟ ಪರಿಶೀಲಿಸಲು ಕೃಷಿ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನುವಿರುವ ಬೀಜ ಮತ್ತು ಪರಿಕರಗಳ ಬಗ್ಗೆ ರೈತರಿಗೆ ಆಗಿಂದಾಗೆ ಮಾಹಿತಿ ನೀಡುವುದು ಮತ್ತು ದರಪಟ್ಟಿಗಳನ್ನು ರೈತರಿಗೆ ಕಾಣುವಂತೆ ಪ್ರದರ್ಶಿಸಲು ಸೂಚಿಸಿದರು.ಜಂಟಿ ಕೃಷಿ ನಿರ್ದೇಶಕ ರವಿ ಮಾತನಾಡಿ, ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ವಿವಿಧ ಬೆಳೆಗಳಿಗೆ ಒಟ್ಟು 4,02, 674 ಹೆಕ್ಟರ್ ನಷ್ಟು ಬಿತ್ತನೆ ಗುರಿ ಹೊಂದಿದ್ದು ಪ್ರಮುಖವಾಗಿ ಹತ್ತಿ-1,86,297 ಹೆಕ್ಟರ್, ಭತ್ತ-1,01,406 ಹೆಕ್ಟರ್, ತೊಗರಿ-84,500 ಹೆಸರು-18,694 ಬಿತ್ತನೆ ಗುರಿ ಹೊಂದಲಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದು ರೈತರು ಭೂಮಿ ಸಿದ್ಧತೆಯಲ್ಲಿ ತೊಡಗಿಕೊಂದ್ದಾರೆ. ಪ್ರಸ್ತುತ ಹಂಗಾಮಿಗೆ ಬಿತ್ತನೆ ಗುರಿಗೆ ಬೇಕಾಗಿರುವ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದರು.ಮುಂಗಾರು ಹಂಗಾಮಿಗೆ ಜಿಲ್ಲೆಗೆ ಒಟ್ಟು 1.30,278 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರದ ಬೇಡಿಕೆ ಇದ್ದು. ಪ್ರಸ್ತುತ 56,601 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಇರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಉಪ ಕೃಷಿ ನಿರ್ದೇಶಕಿ ಮಂಜುಳಾ ಬಸವರಾಜ್, ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಬಸನಗೌಡ ಮಾಲಿಪಾಟೀಲ್ ಮರ್ಕಲ್ ಹಾಗೂ ಎಲ್ಲಾ ತಾಲೂಕಿನ ಅಧ್ಯಕ್ಷರು, ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ, ತಾಂತ್ರಿಕ ಅಧಿಕಾರಿ ರವಿ, ಶಹಪುರ, ಸುರಪುರ ಮತ್ತು ಯಾದಗಿರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಅಧಿಕ ರಸಗೊಬ್ಬರದ ಬಳಕೆ ಬೇಡ: ಡಿಸಿ ಸಲಹೆ: ಯಾದಗಿರಿ ಜಿಲ್ಲೆಯಲ್ಲಿ ಅಧಿಕ ರಸಗೊಬ್ಬರ ಬಳಕೆ ಮಾಡುತ್ತಿದ್ದು. ಮಿತವ್ಯಯ ರಸಗೊಬ್ಬರಗಳ ಬಳಕೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದು ಮತ್ತು ನ್ಯಾನೋ ಏರಿಯ ನ್ಯಾನೋ ಡಿಎಪಿಗಳ ಬಳಕೆ ಬಗ್ಗೆ ಹೆಚ್ಚಿನ ಪ್ರಚಾರ ನೀಡಲು ಸಭೆಯಲ್ಲಿದ್ದ ರಸಗೊಬ್ಬರ ಪೂರೈಕೆದಾರ ಪ್ರತಿನಿಧಿಗಳಿಗೆ ಸೂಚಿಸಿದರು.ರೈತರಿಗೆ ಅನಾವಶ್ಯಕವಾಗಿ ಬೇಡಿಕೆ ಇಲ್ಲದ ರಸಗೊಬ್ಬರಗಳನ್ನು ಒತ್ತಾಯ ಪೂರಕವಾಗಿ ನೀಡದಂತೆ ಎಂದು ಎಚ್ಚರಿಸಿದ ಅವರು ಕಳೆದ ಸಾಲಿನ ಬಾಕಿ ಇರುವ ಬೆಳೆ ವಿಮೆ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಿ ರೈತರಿಗೆ ಬೆಳೆ ವಿಮೆ ಪರಿಹಾರ ಜಮೆ ಆಗುವಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು.