ಸಾರಾಂಶ
ಕಮಲನಗರ ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕರಾದ ಜಗನ್ನಾಥ ಮೂರ್ತಿ ಅಧ್ಯಕ್ಷತೆಯಲ್ಲಿ ಸ್ವಚ್ಛ ಭಾರತ ಮಿಷನ್ ಕುರಿತು ಡಿಇಒ, ಕಾರ್ಯದರ್ಶಿಗಳಿಗೆ, ಕರವಸೂಲಿಗಾರರ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಕಮಲನಗರ
ಸ್ವಚ್ಛ ಭಾರತ ಮಿಷನ್ ದೇಶಾದ್ಯಂತ ಬಯಲು ಮಲ ವಿಸರ್ಜನೆ ನಿರ್ಮೂಲನೆ ಮಾಡುವ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಸ್ವಚ್ಛತೆ, ಸುರಕ್ಷತೆ ಒದಗಿಸುವ ಯೋಜನೆಯಾಗಿದೆ ಎಂದು ಜಿಲ್ಲಾ ಯೋಜನಾ ನಿರ್ದೇಶಕರಾದ ಜಗನ್ನಾಥ ಮೂರ್ತಿ ಹೇಳಿದರು.ಅವರು ಕಮಲಗರ ಗ್ರಾ ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಶೌಚಾಲಯ ಇಲ್ಲದೇ ಇರುವ ಫಲಾನುಭವಿಗಳಿಗೆ ಈ ಯೋಜನೆ ತಲುಪಿಸುವ ಕೆಲಸ ಮಾಡಬೇಕೆಂದು ಸೂಚಿಸಿದರು.
ಸ್ವಚ್ಛ ಭಾರತ ಮಿಷನ್, ಕರ ವಸೂಲಾತಿ, ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ, ವಸತಿ ಯೋಜನೆ ಈ ಎಲ್ಲಾ ಯೋಜನೆಗಳು ಪ್ರಗತಿ ಸಾಧಿಸಲು ಡಿಇಒ, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಅವರ ಪಾತ್ರ ಬಹುಮುಖ್ಯವಾಗಿದೆ ಆದ ಕಾರಣ ಈ ಎಲ್ಲ ವಿಷಯಗಳ ಕುರಿತು ಗಮನಹರಿಸಿ ಕೆಲಸವನ್ನು ನಿರ್ವಹಿಸುವಂತೆ ಖಡಕ ಸೂಚನೆ ನೀಡಿದರು.ತಾಪಂ ಅಧಿಕಾರಿ ಮಾಣಿಕರಾವ ಪಾಟೀಲ ಮಾತನಾಡಿ, ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಶೌಚಾಲಯ ಇಲ್ಲದೇ ಇರುವ ಮನೆಗಳ ಸರ್ವೇ ಮಾಡಲಾಗಿದೆ. ಪಂಚಾಯಿತಿಯಿಂದ ಡಿಇಒ ಅಥವಾ ಕಾರ್ಯದರ್ಶಿ ಅರ್ಜಿ ಕೊಟ್ಟಿರುವ ಮನೆಗಳಿಗೆ ಭೇಟಿ ನೀಡಿ, ಸ್ಥಳಾವಕಾಶ ಇರುವ ಅರ್ಹ ಫಲಾನುಭವಿಗೆ ವರ್ಕ್ ಆರ್ಡರ್ ತೆಗೆದು ಶೌಚಾಲಯ ನಿರ್ಮಿಸಬೇಕು ಈ ಕಾರ್ಯ ಅಕ್ಟೋಬರ ತಿಂಗಳೊಳಗಾಗಿ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು .
ಎಲ್ಲ ಕುಡಿಯುವ ನೀರಿನ ಮೇಲ್ತೊಟ್ಟಿಗಳನ್ನು, ಟ್ಯಾಂಕರ್, ಪೈಪ್ ಲೈನ್ ರಿಪೇರಿ, ಡ್ರೈನೇಜ್ ಕ್ಲೀನಿಂಗ್, ಬೋರ್ ವೆಲ್, ತೆರೆದ ಬಾವಿಗಳನ್ನು ಶುದ್ಧಗೊಳಿಸಿ, ನೀರನ್ನು ಶೇಖರಣೆ ಮಾಡಬೇಕು. ಜನತೆಗೆ ಶುದ್ಧ ಕುಡಿಯುವ ನೀರು ತಲುಪಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.ಸಹಾಯಕ ನಿರ್ದೇಶಕರಾದ ಹಣಮಂತರಾಯ ಕೌಟಗೆ, ಸ್ವಚ್ಚ ಭಾರತ ಮಿಷನ್ ಸಂಯೋಜಕರಾದ ಪಂಡಿತ, ಎಲ್ಲಾ ಗ್ರಾಪಂ ಡಿಇಒ, ತಾಪಂ ಐಇಸಿ ಸಂಯೋಜಕರಾದ ಸವಿತಾ ನಾಗೇಶ, ಸಿಬ್ಬಂದಿ ಗಣೇಶ, ಸ್ವಪ್ನಾ, ಸಂಪತಿ ಹಾಜರಿದ್ದರು.